ಬಂಟ್ವಾಳ : ಅವಧಿ ಹಾಗೂ ನಿಯಮ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ವತಿಯಿಂದ ನಡೆಸಲಾಗುತ್ತಿರುವ ಹೋರಾಟದ ರೂಪು ರೇಷೆಯನ್ನು ಇನ್ನಷ್ಟು ಉಗ್ರಗೊಳಿಸಲಾಗಿದ್ದು, ಇದರ ಭಾಗವಾಗಿ ನವೆಂಬರ್ 17 ರ ಮಂಗಳವಾರ ಬೆಳಿಗ್ಗೆ 9-30 ರಿಂದ 18 ರ ಬುಧವಾರ ಬೆಳಿಗ್ಗೆ 9.30ರವರೆಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ 24 ತಾಸುಗಳ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ತಿಳಿಸಿದರು.
ಈ ಬಗ್ಗೆ ಬಿ ಸಿ ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಲ್ಲಿನ ಟೋಲ್ ಗೇಟ್ ತೆರವಿಗೆ ಕಳೆದ ಕೆಲವು ಸಮಯಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದ್ದರೂ ಹೆದ್ದಾರಿ ಪ್ರಾಧಿಕಾರವಾಗಲೀ, ಕೇಂದ್ರ ಸರಕಾರವಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡುತ್ತಿಲ್ಲ. ಟೋಲ್ ಆರಂಭಿಸಿ ಈಗಾಗಲೇ 23 ವರ್ಷಗಲೂ ಕಳೆದಿದ್ದು, ಮತ್ತಷ್ಟು ಸಂಗ್ರಹಕ್ಕೆ ಪಣತೊಟ್ಟಂತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ನಾವು ಜನರ ಜೊತೆ ಸೇರಿ ಮತ್ತಷ್ಟು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.
ಇಲ್ಲಿನ ಅವ್ಯವಸ್ಥೆಯ ಟೋಲ್ ಗೇಟ್ ಸಹಿತ ಮುಂದಿನ ದಿನಗಳಲ್ಲಿ ದೂರ ಅಂತರ ನಿಯಮ ಪಾಲಿಸದೆ 30 ಕಿ ಮೀ ಅಂತರದಲ್ಲಿ ವಳಾಲು ಎಂಬಲ್ಲಿ, 27 ಕಿ ಮೀ ಅಂತರದಲ್ಲಿ ಪಣಕಜೆ ಹಾಗೂ 32 ಕಿ ಮೀ ದೂರದಲ್ಲಿ ಗಂಜಿಮಠ ಎಂಬಲ್ಲಿ ಹೊಸ ಟೋಲ್ ಬೂತ್
ಗಳನ್ನು ತೆರೆಯಲು ಸಿದ್ದತೆ ನಡೆಸುತ್ತಿರುವುದು ಕೂಡಾ ತಿಳಿದು ಬಂದಿದೆ ಎಂದ ಅವರು, ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಟೋಲ್ ಕೇಂದ್ರ ಆರಂಭಿಸಿದಲ್ಲಿ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದು ಅತಿ ದುಬಾರಿಯಾಗಲಿದೆ ಎಂದರು.
ಅಲ್ಲದೆ ಇಲ್ಲಿನ ಟೋಲ್ ಕೇಂದ್ರದ ಸಿಬ್ಬಂದಿಗಳು ಸ್ಥಳೀಯ ಜನರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದೆ ಒರಟು ವರ್ತನೆ ತೋರುತ್ತಿರುವುದು ಕೂಡಾ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಎಲ್ಲಾ ಕಾರಣಗಳಿಗಾಗಿ ಇಲ್ಲಿನ ಅವೈಜ್ಞಾನಿಕ ಹಾಗೂ ನಿಯಮ ಮೀರಿದ ಟೋಲ್ ಗೇಟ್ ತೆರವುಗೊಳ್ಳಲೇಬೇಕು ಎಂದು ಆಗ್ರಹಿಸಿ ನಡೆಸಲಾಗುವುದು ಆಹೋರಾತ್ರಿ ಧರಣಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸುವಂತೆ ರಮಾನಾಥ ರೈ ಕರೆ ನೀಡಿದರು .
ಈ ಸಂದರ್ಭ ಹೋರಾಟ ಸಮಿತಿ ಸಂಚಾಲಕರಾದ ಮೋಹನ್ ಶೆಟ್ಟಿ, ಬಿ ಶೇಖರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸುರೇಶ್ ಕುಮಾರ್, ಮುಹಮ್ಮದ್ ನಂದಾವರ, ಎನ್ ಅಬ್ದುಲ್ ಕರೀಂ ಬೊಳ್ಳಾಯಿ ಮೊದಲಾದವರು ಉಪಸ್ಥಿತರಿದ್ದರು.









