ಬಂಟ್ವಾಳ :ಕಲೆ ಮತ್ತು ಸಾಹಿತ್ಯಕ್ಕಾಗಿ ಸಮರ್ಪಿತವಾದ ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಘಟಕದ ಅಶ್ರಯದಲ್ಲಿ ನಟರಾಜ ಪೂಜನ ಗುರು ವಂದನಾ ಕಾರ್ಯಕ್ರಮ ಪ್ರಯುಕ್ತ ಯಕ್ಷಗಾನ ಕಲಾವಿದ ರಾಷ್ಟ್ರ ಪ್ರಶಸ್ತಿ ವಿಜೇತರಾದ ಯಕ್ಷಗಾನ ದಶವತಾರಿ ಸೂರಿಕುಮೇರು ಕೆ ಗೋವಿಂದ ಭಟ್ ಇವರಿಗೆ ಗುರುವಂದನೆ ಕಾರ್ಯಕ್ರಮ ಜು.13ರಂದು ಆದಿತ್ಯವಾರ ಸಂಜೆ ಬಿ ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಸೂರಿಕುಮೇರು ಕೆ ಗೋವಿಂದ ಭಟ್, ಕಲೆ ಎಂಬುದು ಅಮೂರ್ತ, ಅದಕ್ಕೆ ನಿಖರ ಸ್ವರೂಪ ಇಲ್ಲ, ಎಲ್ಲಾ ಕಲೆಗಳ ಮೂಲ ಉದ್ದೇಶವಿರುವುದು ಜನರ ಶಾಂತಿ, ಸಮಾಧಾನ, ಆನಂದಕ್ಕಾಗಿ, ಯಕ್ಷಗಾನವೊಂದು ಎಳೆಯಿಲ್ಲದ ಕಲೆಯಾಗಿದೆ. ಸತ್ಯ, ಸಾಕ್ಷತ್ಕಾರವೇ ಕಲೆಯ ಪರಮ ಗುರಿ ಎಂದು ಹೇಳಿದರು.
ಅಭಿನಂದನಾ ಮಾತುಗಳನ್ನಾಡಿದ ಹಿರಿಯ ಯಕ್ಷಗಾನ ದಿಗ್ಗಜ ಶಿವರಾಮ ಜೋಗಿ ಮಾತನಾಡಿ, ಮೇರು ವ್ಯಕ್ತಿತ್ವ ಹಾಗೂ ವಿದ್ವತ್ತು ಹೊಂದಿರುವ ಗೋವಿಂದ ಭಟ್ಟರಿಗೆ ತನ್ನೊಂದಿಗೆ ಇತರ ಕಲಾವಿದರನ್ನು ರಂಗದಲ್ಲಿ ಬೆಳೆಸುವ ವಿಶೇಷ ಗುಣವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆಯೇ ಗುರು ಶಿಷ್ಯ ಸಂಸ್ಕೃತಿ, ಗುರುವನ್ನು ಮರೆಯದ ಕ್ಷೇತ್ರವಿದ್ದರೆ ಅದು
ಕಲಾ ಕ್ಷೇತ್ರ. ಕಲೆಯು ವ್ಯಕ್ತಿಯ ವಿಕಸನದೊಂದಿಗೆ ರಾಷ್ಟ್ರದ ವಿಕಾಸನಕ್ಕೆ ಪೂರಕವಾಗಲಿ, ನಮ ಧರ್ಮ ಸಂಸ್ಕೃತಿ, ಸಂಸ್ಕಾರವನ್ನು ಸೇವೆ ಮತ್ತು ತ್ಯಾಗದ ಮೂಲಕ ಉಳಿಸಿ ಬೆಳೆಸುವ ಕಾರ್ಯ ವಾಗಲಿ ಎಂದು ಹೇಳಿದರು.
ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಪ್ರಾಸ್ತವಿಕವಾಗಿ ಮಾತನಾಡಿದರು, ಸಂಸ್ಕಾರ ಭಾರತೀ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಸ್ವಾಗತಿಸಿ,ಮಾನಸ ಕಡೆಗೋಳಿ ಸಂಸ್ಕಾರ ದ್ಯೇಯ ಗೀತೆ ಹಾಡಿದರು, ವಿಜಯ ಶೆಟ್ಟಿ ಶಾಲೆತ್ತೂರು ಸನ್ಮಾನ ಪತ್ರವಾಚಿಸಿದರು,ಕಾರ್ಯಕಾರಿಣಿ ಸದಸ್ಯ ಜಗದೀಶ ಕಡೆಗೋಳಿ ಧನ್ಯವಾದವಿತ್ತರು, ಮಹಿಮಾ ಬಿ ರೈ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸೂರಿಕುಮೇರು ಕೆ ಗೋವಿಂದ ಭಟ್ ರೊಡನೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮೊದಲು ಉಪನ್ಯಾಸಕ ಜಯಾನಂದ ಪೆರಾಜೆ ಹಾಗೂ ಡಾ ವಾರಿಜ ನಿರ್ಬೈಲು ಇವರಿಂದ ಗಮಕ ಕಾರ್ಯಕ್ರಮ ನಡೆಯಿತು.













