Coastal Bulletin

ಮಂಗಳೂರು: ಯಾವುದೇ ಕೆಲಸವನ್ನು ಮನಪೂರ್ವಕ ಮಾಡಿದಾಗ ಯಶಸ್ಸು ದೊರೆಯುತ್ತದೆ ಎನ್ನುವ ತಮ್ಮ ಗುರುಗಳ ಬೋಧನೆ ಅವರ ಜೀವನ ,ಸಾಧನೆ ಮತ್ತು ಸಂದೇಶ ಎನ್ನುವ ಅನುಭವವಾಗಿದೆ. ಪೂನಾದಲ್ಲಿ ಶಾಖಾ ಮಠ, ಆವರ್ಸೆ ಮಠದ ಜೀರ್ಣೋದ್ಧಾರ ಸೇರಿದಂತೆ ಶ್ರೀಮಠ ಮತ್ತು ಸಮಾಜದ ಬಗ್ಗೆ ಅವರು ಕಂಡಿದ್ದ ಕನಸು, ಚಿಂತನೆಗಳ ಅನುಷ್ಠಾನದಲ್ಲಿ ಕಾಣುತ್ತಿರುವ ಯಶಸ್ಸಿನ ಹಿಂದೆ ಗುರುವರ್ಯರ ಆಶೀರ್ವಾದ ಮತ್ತು ಶಿಷ್ಯವರ್ಗದ ಸೇವೆ ಕಾರಣವಾಗಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್‌ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿ ನುಡಿದರು.

ಅವರು ಶನಿವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜೀವೋತ್ತಮ ಮಂಟಪದಲ್ಲಿ ತಮ್ಮ ಗುರುವರ್ಯ ಶ್ರೀಮದ್‌ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯತಿಥಿ ಮಹೋತ್ಸವ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 

ಗುರು ಗುಣಗಾನದ ಜತೆಗೆ ಸ್ವಾಗತದ ಮಾತುಗಳನ್ನಾಡಿದ ಕೇಂದ್ರೀಯ ಮಠ ಸಮಿತಿಯ ಅಧ್ಯಕ್ಷ ಶ್ರೀನಿವಾಸ ವಿ.ಧೆಂಪೋ ಗುರು ವಿದ್ಯಾಧಿರಾಜ ತೀರ್ಥರು ಸಮಾಜವನ್ನು ವಿಜ್ಞಾನದ ದೃಷ್ಠಿಕೋನದೊಂದಿಗೆ ಅಜ್ಞಾನದಿಂದ ಸುಜ್ಞಾನದೆಡೆಗೆ ಮುನ್ನಡೆಸಿದವರು ಎಂದರು. ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್‌ ಮಾತನಾಡಿ ಭಾರತ ಜಗತ್ತಿನಲ್ಲೇ ಸೂಪರ್‌ ಪವರ್‌ ಆಗುವ ನಿಟ್ಟಿನಲ್ಲಿ ಸಮಾಜದ ವಿವಿಧ ಸಮುದಾಯಗಳೂ ಸೂಪರ್‌ ಪವರ್‌ ಆಗಬೇಕಾಗುತ್ತದೆ. ಸಾರಸ್ವತ ಸಮಾಜ ಈ ನಿಟ್ಟಿನಲ್ಲಿ ಮಾದರಿಯಾಗಿ ಮುನ್ನಡೆಯುವಲ್ಲಿ ಗುರು ವಿದ್ಯಾಧಿರಾಜ ತೀ‍ರ್ಥರ ಕೊಡುಗೆ ಮಹತ್ವದ್ದು ಎಂದರು.  

ವೇ.ಮೂ. ಬಿ. ಮುಕುಂದ ಭಟ್‌ ಮಾತನಾಡಿ ಗುರುಗಳ ದಯೆಯಿಂದ ಸಮಾಜಕ್ಕೆ ಶ್ರೇಷ್ಠತೆ ಜೇಷ್ಠತೆ ಪ್ರಾಪ್ತವಾಗಿದ್ದು ಶ್ರೇಷ್ಠ ರತ್ನವಾಗಿದ್ದ ಗುರು ವಿದ್ಯಾಧಿರಾಜರು ವೃಂದಾವನಸ್ಥರಾಗುವ ಮೊದಲು ಶ್ರೇಷ್ಠ ಶಿಷ್ಯರತ್ನವನ್ನು ಸಮಾಜಕ್ಕೆ ಅನುಗ್ರಹಿಸಿದ್ದಾರೆ ಎಂದರು. ಉದ್ಯಮಿ ಪಿ.ದಯಾನಂದ ಪೈ ತಮ್ಮ ಕುಟುಂಬದ ಪರವಾಗಿ ಸೇವಾರೂಪದಲ್ಲಿ ಆರ್ಥಿಕ ದೇಣಿಗೆ ಹಸ್ತಾಂತರಿಸಿ ಗುರುಪೀಠಕ್ಕೆ ತನುಮನಧನ ಸೇವೆಯ ಮೂಲಕ ಸಮಾಜ ಗುರುಋಣ ಸಲ್ಲಿಸುವಂತಾಗಲಿ ಎಂದು ಹಾರೈಸಿದರು. 

ಕೇಂದ್ರ ಸಮಿತಿ ಕಾರ್ಯದರ್ಶಿ ಅನಿಲ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಠ ಸಮಿತಿ ಉಪಾಧ್ಯಕ್ಷ ಆರ್.ಆರ್.‌ ಕಾಮತ್‌ , ಶಿವಾನಂದ ಸಾಲ್ಗಾಂವ್ಕರ್ , ಸಂಘಟನಾ ಸಮಿತಿ ಅಧ್ಯಕ್ಷ ದಿನೇಶ್‌ ನಾಯಕ್‌ ಹುಬ್ಬಳ್ಳಿ

ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾದಾರರು, ಸಾಧಕರನ್ನು ಶ್ರೀಗಳವರು ಗೌರವಿಸಿದರು. ಗುರುಗಳ ಕುರಿತಾದ ಸಾಕ್ಷ್ಯಚಿತ್ರ, ಯಶೋಗಾಥಾ ಸ್ಮರಣ ಸಂಚಿಕೆ, ತಿರುಪತಿ ಲಡ್ಡು ಪ್ರಸಾದ ವಿತರಣೆ , ಮಠ ಆವರಣದ ಸುವ್ಯವಸ್ಥೆ, ವಿದ್ಯುದ್ದೀಪಾಲಂಕಾರಗಳು ಗಮನ ಸೆಳೆದವು.

ಪ್ರದೀಪ್‌ ಜಿ.ಪೈ ವಂದಿಸಿದರು. ಪ್ರಸನ್ನ ಪ್ರಭು ಗೌರವಾನ್ವಿತರ ವಿವರ ನೀಡಿದರು.

ಕಳೆದ ಶುಕ್ರವಾರ ದಿಂದ ಮೂರು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಹವನಾದಿ ಧಾರ್ಮಿಕ ಸಾಂಸ್ಕೃತಿಕ ಕಲಾಪಗಳು , ನೂತನ ವಸತಿ ಕೊಠಡಿಗಳ ಲೋಕಾರ್ಪಣೆ, ಗುರುಗಳ ಕುರಿತಾದ ವಸ್ತುಗಳ ಪ್ರದರ್ಶನ, ಶನಿವಾರ ಪುಣ್ಯತಿಥಿ ಆಚರಣೆ, ಸ್ವಾಮಿ ವಿದ್ಯಾಧಿರಾಜ ಭವನದ ಉದ್ಘಾಟನೆ, ವೃಂದಾವನದಲ್ಲಿ ಮುಖ್ಯಪ್ರಾಣ ವಿಗ್ರಹ ಪ್ರತಿಷ್ಠೆ, ರವಿವಾರ ಆಷಾಢ ಏಕಾದಶಿಯಂದು ಏಕಾಹ ಭಜನೆ, ತಪ್ತಮುದ್ರಾಧಾರಣೆ ಜರಗಿದವು.

ಗುರು ಸೇವಾ ಪ್ರಸಾದದ ಧನ್ಯತೆ!‌

ಪುಣ್ಯತಿಥಿ ಆರಾಧನಾ ಮಹೋತ್ಸವದಂದು ವೃಂದಾವನದಲ್ಲಿ ಮುಖ್ಯಪ್ರಾಣ ವಿಗ್ರಹ ಪ್ರತಿಷ್ಠೆ ನಡೆದು ಶ್ರೀಗಳವರು ಆರತಿ ಬೆಳಗುವಾಗ ತುಳಸೀ ಹಾರವೊಂದು ಪ್ರಸಾದ ರೂಪದಲ್ಲಿ ಕೆಳಗೆ ಬಿದ್ದದ್ದು , ಮಳೆಯ ತೊಂದರೆಯಿಲ್ಲದೇ ಶಿಷ್ಯವರ್ಗವೇ ಸಾಗರೋಪಾದಿಯಲ್ಲಿ ಬಂದದ್ದು ಸಂತಸಕ್ಕೆ ಕಾರಣವಾಗಿದೆ ಎಂದು ಗುರುವರ್ಯರು ಉಲ್ಲೇಖಿಸಿದರು. ಮಹೋತ್ಸವದ ಸೇವೆ, ಗಂಧಲೇಪನ ,ಕ್ಷೀರಾಭಿಷೇಕ , ಉಪಹಾರ , ಆಮಂತ್ರಣ ಹೀಗೆ ಪ್ರತಿಯೊಂದರಲ್ಲೂ ಗುರುಸ್ಮರಣೆಯ ಸಂಕೇತಗಳಿರುವುದರ ಹಿನ್ನೆಲೆಯನ್ನು ಶ್ರೀಗಳವರು ವಿವರಿಸಿದರು. 

 ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್.  ರಾಜ್ಯ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್‌ ಸಹಿತ ಪ್ರಮುಖರು ,ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ಸಹಸ್ರಾರು ಮಂದಿ ಮಠದ ಅನುಯಾಯಿಗಳು ಈ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Comment