ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ಕದನ ವಿರಾಮ ಬಿದ್ದಿದೆ. ಆದರೆ, ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಗಿದಿಲ್ಲ, ಅದು ಮುಂದುವರಿಯಲಿದೆ ಎಂದು ಭಾರತೀಯ ವಾಯುಪಡೆ(IAF) ತಿಳಿಸಿದೆ.
ಕಾರ್ಯಾಚರಣೆಯ ವೇಳೆ ತನಗೆ ವಹಿಸಲಾದ ಕಾರ್ಯಗಳನ್ನು ನಿಖರವಾಗಿ ಮತ್ತು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಐಎಎಫ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆ ಮುಗಿದಿಲ್ಲ. ಇನ್ನೂ ಚಾಲ್ತಿಯಲ್ಲಿರುವ ಕಾರಣ, ವಿವರವಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ನೀಡಲಾಗುವುದು. ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ ಎಂದು ತಿಳಿಸಿದೆ.
ಪ್ರವಾಸಿಗರ ಹತ್ಯೆಗೆ ಪ್ರತೀಕಾರ: ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮೇ 7 ರಂದು ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) ಉಗ್ರರ 9 ನೆಲೆಗಳಿಗೆ ಡ್ರೋನ್, ಕ್ಷಿಪಣಿಗಳನ್ನು ನುಗ್ಗಿಸಿ ಧ್ವಂಸ ಮಾಡಿತ್ತು.
ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನವೂ ಕ್ಷಿಪಣಿ ದಾಳಿ ನಡೆಸಿತ್ತು. ಇದು ಸಂಘರ್ಷವನ್ನು ತೀವ್ರಗೊಳಿಸಿತ್ತು.
ಪಾಕಿಸ್ತಾನದ ಒಳನುಗ್ಗಿದ ಭಾರತೀಯ ಸೇನೆ ರಾವಲ್ಪಿಂಡಿ, ಇಸ್ಲಾಮಾಬಾದ್, ಪಂಜಾಬ್ ಪ್ರಾಂತ್ಯ ಸೇರಿದಂತೆ ಹಲವೆಡೆ ದಾಳಿ ಮಾಡಿತ್ತು.
ನಾಲ್ಕೇ ದಿನದಲ್ಲಿ ಕದನ ವಿರಾಮ: ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ತಾನ ಅಮೆರಿಕದ ಮೂಲಕ ಭಾರತವನ್ನು ಕದನ ವಿರಾಮಕ್ಕೆ ಆಹ್ವಾನಿಸಿತು. ಮೇ 10ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಘರ್ಷದಲ್ಲಿರುವ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿದ್ದಾಗಿ ಘೋಷಿಸಿದರು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು, ಭಾರತೀಯ ಸೇನೆಯು ಪಾಕಿಸ್ತಾನದ ಮೇಲಿನ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡಿವೆ. ಮೇ 12ರಂದು ಡಿಜಿಎಂಒ ಮಟ್ಟದ ಮಾತುಕತೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಕದನ ವಿರಾಮ ಘೋಷಿಸಿದ ಗಂಟೆಗಳ ತರುವಾಯ ಪಾಕಿಸ್ತಾನವು ಭಾರತದ ಗಡಿಯಲ್ಲಿ ಒಪ್ಪಂದವನ್ನು ಉಲ್ಲಂಘಿಸಿ ಶೆಲ್, ಕ್ಷಿಪಣಿ ದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಭಾರತವು, ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ದಾಳಿಯನ್ನು 'ಯುದ್ಧ ಕೃತ್ಯ' ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.














