ಉಡುಪಿ: ನಗರದ ಅಂಬಾಗಿಲು ವಾರ್ಡ್‌ನ ಕಕ್ಕುಂಜೆ ಪ್ರದೇಶದಲ್ಲಿ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅವರ ರುಂಡ ಬೇರ್ಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು ಪುರುಷೋತ್ತಮ ನಾಯಕ್ (52) ಎಂದು ಗುರುತಿಸಲಾಗಿದೆ.
ಮೃತ ಪುರುಷೋತ್ತಮ ನಾಯಕ್ ಅವರು ತಮ್ಮ ಮನೆಯ ಬಾವಿಯಲ್ಲಿ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ರುಂಡ ಬೇರ್ಪಟ್ಟ ಪರಿಣಾಮ ಬಾವಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರರಾಗಿದ್ದಾರೆ. ಮೃತರು ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅವರು ನಿವೃತ್ತಿ ಅಂಚಿನಲ್ಲಿದ್ದರು.
ಪುರುಷೋತ್ತಮ ನಾಯಕ್ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ನಾಯಕ್ ಕುಟುಂಬವು
ಸ್ಥಳೀಯವಾಗಿ ಒಳ್ಳೆಯ ಹೆಸರು ಪಡೆದಿತ್ತು. ಆರ್ಥಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಳಿಕ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಪರಿಹಾರವಲ್ಲ: ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲ ಬೇಕಿದ್ದರೆ, ಸ್ನೇಹ ಫೌಂಡೇಶನ್ 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ)ಗೆ ಕರೆ ಮಾಡಬಹುದು.















