ಬಂಟ್ವಾಳ: ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಪೌಷ್ಟಿಕಾಹಾರ ನೀಡುವುದರ ಜೊತೆಗೆ ವೈದ್ಯಕೀಯ ನೆರವು ನೀಡುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ದೇವರು ಮೆಚ್ಚುವ ಕೆಲಸ ಹಾಗೂ ಪ್ರಧಾನ ಮಂತ್ರಿಯವರ ಸಂಕಲ್ಪಕ್ಕೆ ಶಕ್ತಿ ತುಂಬುವ ಕಾರ್ಯ ಎಂದು ಸಂಸದ ಕ್ಯಾ ಬೃಜೇಶ್ ಚೌಟ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಿಗಳಿಗೆ ಆಹಾರ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ಷಯಮುಕ್ತ ಭಾರತ ನಿರ್ಮಾಣ ಪ್ರಧಾನಿಯವರ ಕನಸಾಗಿದೆ. ಪೌಷ್ಟಿಕಾಂಶದ ಕೊರತೆಯಿಂದ ಕ್ಷಯ ರೋಗ ಉಲ್ಭಣಿಸುವುದರಿಂದ ಸಂಘ ಸಂಸ್ಥೆಗಳ ಸಹಕಾರದ ಮೂಲಕ ನಿಕ್ಷಯ್ ಮಿತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ರೋಗಿಗೆ ಜಾಗೃತಿ ಹಾಗೂ ಆರೋಗ್ಯ ಮಾಹಿತಿ ನೀಡುವುದರ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯವೂ ಆಗಬೇಕಾಗಿದೆ. ಈ ಕಾರ್ಯ ಯಶಸ್ಬಿಯಾಗಬೇಕಾದರೆ ಸಮುದಾಯದ ಸಹಕಾರವೂ ಅಗತ್ಯವಾಗಿದೆ ಎಂದು ತಿಳಿಸಿದ ಅವರು ಸೇವಾಂಜಲಿಯ ಈ ಮಾದರಿ ಸೇವಾ ಕಾರ್ಯವನ್ನು ಇತರ ಸಂಘ ಸಂಸ್ಥೆಗಳು ಅನುಸರಿಸಿದರೆ ನಮ್ಮಜಿಲ್ಲೆಯನ್ನು ಕ್ಷಯಮುಕ್ತವನ್ನಾಗಿ ಮಾಡಲು ಸಾಧ್ಯವಿದೆ ಎಂದರು.
ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ. ಆದರ್ಶ್ ಶೆಟ್ಟಿ
ಕ್ಷಯರೋಗದ ಬಗ್ಗೆ ಆರೋಗ್ಯ ಮಾಹಿತಿ ನೀಡಿದರು.ರೋಟರಿ ಕ್ಲಬ್ ಬಂಟ್ವಾಳ ದ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ತಿಳಿಸಿದರು
ವೇದಿಕೆಯಲ್ಲಿ ರೋಟರಿ ಕ್ಲಬ್ ನ ವಲಯ ಸೇನಾನಿ ಪ್ರಕಾಶ್ ಬಾಳಿಗ, ಮಾಜಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿವೃತ್ತ ಅಬಕಾರಿ ಅಧಿಕಾರಿ ಎಂ.ಆರ್. ನಾಯರ್, ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್, ಕೆ. ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ. ಅಖಿಲೇಶ್ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಟ್ರಸ್ಟಿ ಕೊಡ್ಮಾನ್ ದೇವದಾಸ್ ಶೆಟ್ಟಿ, ನಾರಾಯಣ ಬೆಳ್ಚಾಡ,ಗಣೇಶ್ ಸುವರ್ಣ, ಭಾಸ್ಕರ ಚೌಟ, ಪದ್ಮನಾಭ ಶೆಟ್ಟಿ, ಸುಕೇಶ್ ಶೆಟ್ಟಿ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಶಿವರಾಜ್ ಸುಜೀರ್ ಮತ್ತಿತರರು ಭಾಗವಹಿಸಿದ್ದರು.












