ಬಂಟ್ವಾಳ :ದೇಶ ಕಂಡ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆ. ತನ್ನ ಸತ್ಯ ಅಹಿಂಸೆ ಉದಾತ್ತ ಚಿಂತನೆಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಬೇರೂರಿ ನಿಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹಾಗೂ ತನ್ನ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮತ್ತು ಭಾರತದ ಉಳಿವಿಗೆ ದಿಟ್ಟ ನಿರ್ಧಾರ ಕೈಗೊಂಡ ನಿಶ್ಮಲ್ಮಶ ರಾಜಕಾರಣಿ ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತೀಜಿಯವರು. ಮಹಾನ್ ಚೇತನರಿಬ್ಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಇವರ ಜಯಂತಿ ದಿನವನ್ನು ನಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಮ್ಮ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ತತ್ವ ಆದರ್ಶಗಳನ್ನು ಮೈಗೂಡಿಸುವಂತೆ ತನ್ನ ಅಧ್ಯಕ್ಷೀಯ ನೆಲೆಯಲ್ಲಿ ಮಾತಾಡಿದರು. ಈ ಕಾರ್ಯಕ್ರಮದ ಕುರಿತಾಗಿ ಪ್ರಧಾನ ಭಾಷಣ ಮಾಡಿದ ನಮ್ಮ ಶಾಲಾ ಕನ್ನಡ ಭಾಷಾ ಶಿಕ್ಷಕ ಶಿವಕುಮಾರ್ ಎಂ ಜಿ ಇವರು, ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜೀವನ, ಹೋರಾಟಗಳು, ಈ ದೇಶಕ್ಕೆ
ನೀಡಿದ ಮಹಾನ್ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಈ ಕಾರ್ಯಕ್ರಮದ ಕುರಿತಾಗಿ ಭಾಷಣಗಳು ನಡೆಯಿತು. ಕಾರ್ಯಕ್ರಮದ ವಿಶೇಷತೆಯಾಗಿ ಶಾಲಾ ಆವರಣದ ಸುತ್ತ ಹಾಗೂ ರಸ್ತೆ ಬದಿಯ ಸ್ವಚ್ಛತೆಯನ್ನು ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕ ಜಗನ್ನಾಥ ಪಿ ಇವರು ಸ್ವಾಗತಿಸಿ ನಿರ್ವಹಿಸಿದರು. ಹಿಂದಿ ಭಾಷಾ ಶಿಕ್ಷಕಿ ಶಾಂತಾ ವಂದಿಸಿದರು.















