ಬಂಟ್ವಾಳ, ಜು.2: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಪರಿಸರ, ಪ್ರಕೃತಿ, ವೃಕ್ಷ ಮತ್ತು ವನ ಸಂರಕ್ಷಣೆ ಸಮೃದ್ಧ ಬದುಕಿಗೆ ಸೋಪಾನವಾಗುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಆಲಂಪುರಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ, ಪ್ರಾಣಿ ಮತ್ತು ವನ ಸಂರಕ್ಷಣೆಯ ಕಾರ್ಯ ನಮ್ಮ ಸಂಕಲ್ಪವಾಗಬೇಕು ಎಂದು ಹೇಳಿದರು.
ಪರಿಸರ ದಿನ, ವನಮಹೋತ್ಸವದ ದಿನದಂದು ಮಾತ್ರ ಸಸಿ ನೆಟ್ಟು, ನಮ್ಮ ಪರಿಸರ ಪ್ರೇಮ ಮೆರೆದರೆ ಸಾಲದು, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
ಕಳೆದ ಕೆಲವು ತಿಂಗಳುಗಳಲ್ಲಿ ಇಡೀ ಜಗತ್ತು ಬಿರು ಬಿಸಿಲಿನ ತಾಪದಿಂದ ತತ್ತರಿಸಿ ಹೋಯಿತು. ಭಾರತದಲ್ಲಿ ಈ ಬಾರಿ 40 ಸಾವಿರಕ್ಕೂ ಹೆಚ್ಚು ಜನರು ಸೌರಾಘಾತಕ್ಕೆ ಈಡಾಗಿದ್ದು, 100ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಸೌರಶಾಖ ತಾಳಲಾರದೆ ನರಳಿ ಮೃತಪಟ್ಟಿದ್ದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ತಾಪಮಾನ ಏರಿಕೆ ತಡೆಯಲು ವೃಕ್ಷ ಸಂರಕ್ಷಣೆಯೇ ಪರಿಹಾರ ಎಂದರು.
ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುತ್ತಿದ್ದರು, ಬೆಟ್ಟ, ಗುಡ್ಡ, ನದಿ ಪೂಜಿಸುತ್ತಿದ್ದರು. ಅವರಿಗೆ ಪರಿಸರದ ಕಾಳಜಿ ಇತ್ತು. ನಾವು ಕೂಡ ಪರಿಸರ ಸಂರಕ್ಷಣೆ ಮಾಡಿ, ಇರುವುದೊಂದೇ ಭೂಮಿಯನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಅರಣ್ಯದ ಬಳಿ, ಅರಣ್ಯದಲ್ಲಿ ಪಶು ಪಕ್ಷಿಗಳಿಗೆ ಆಹಾರ ನೀಡುವ ಫಲ ನೀಡುವ ವೃಕ್ಷ ನಾಟಿ ಮಾಡುವ ಈ ಯೋಜನೆ ಫಲಪ್ರದ ಕಾರ್ಯಕ್ರಮ ಎಂದು ಬಣ್ಣಿಸಿದರು.
ಮಾಜಿ ಸಚಿವ ರಮಾನಾಥ ರೈ ಅವಿನಾಶ್ ಕೊಡಂಕಿರಿ ಅವರಿಗೆ ಅರಣ್ಯಮಿತ್ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ , ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸರ್ಕಾರ ತಾಲೂಕಿಗೊಂದು ಸಸ್ಯೋದ್ಯಾನ ನಿರ್ಮಿಸುತ್ತಿದ್ದು, ಎಲ್ಲ ಊರಿನಲ್ಲೂ ಶುದ್ಧ ಗಾಳಿಗೆ ಒಂದು ನಿರ್ದಿಷ್ಟ ಸ್ಥಳ ಕಾಯ್ದಿರಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಹೊಸ
ಸಸಿ ನೆಡುವುದರ ಜೊತೆಗೆ ಇರುವ ವೃಕ್ಷಗಳ ಸಂರಕ್ಷಣೆಯನ್ನೂ ನಾವು ಮಾಡಬೇಕು. ಆಗ ಮಾತ್ರ ಹಸಿರು ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ವೀಕ್ಷಿಸಿ, ಅಲ್ಲಿರುವ ವೃಕ್ಷಗಳ ಮಾಹಿತಿ ಪಡೆದರು. ಸಸ್ಯೋದ್ಯಾನಗಳಿಗೆ ಬರುವ ಮಕ್ಕಳಿಗೆ, ಜನರಿಗೆ ಕನಿಷ್ಠ 10 ಗಿಡ ಮರಗಳನ್ನು ಗುರುತಿಸುವಂತೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಶಾಸಕ ರಾಜೇಶ್ ನಾಯ್ಕ್ , ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮಂಗಳೂರು ವೃತ್ತ ಸಿ.ಎಫ್. ಡಾ. ವಿ.ಕರಿಕಲನ್, ಮಂಗಳೂರು ವಿಭಾಗದ ಡಿಸಿಎಫ್ ಆಂಟೊನಿ ಮರಿಯಪ್ಪ ವೈ.ಕೆ., ಮಂಗಳೂರು ಉಪವಿಭಾಗದ ಸಹಾತಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀನಾರಯಣ ಶರ್ಮ, ಅರಣ್ಯ ಅಧಿಕಾರಿ ಕಮಲ ಕರಿಕಲನ್, ಜಿ.ಪಂ. ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಸುಲೋಚನಾ ಭಟ್ ಪ್ರಮುಖರಾದ ಜಿನರಾಜ ಆರಿಗ, ಚಿದಾನಂದ ರೈ ಕಕ್ಯ, ಚಂದ್ರಶೇಖರ ಶೆಟ್ಟಿ ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜಾ, ಒಕ್ಕೂಟದ ಅಧ್ಯಕ್ಷ ಉಮೇಶ್ ಮೊದಲಾದವರಿದ್ದರು.
ಎಸ್ಕೆಡಿಆರ್ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಅರಣ್ಯ ಪ್ರದೇಶದಲ್ಲಿಯೇ ಹಣ್ಣಿನ ಗಿಡಗಳನ್ನು ನಾಟಿ ಮಾಡಿ ಪೋಷಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ೪ ವರ್ಷಗಳಲ್ಲಿ ೩.೭೦ ಲಕ್ಷ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ. ಅರಣ್ಯ ಸಂಪತ್ತು ಉಳಿಸುವ ಜೊತೆಗೆ ಪ್ರಾಣಿ ಸಂಕುಲವನ್ನು ಉಳಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಎಸ್ಕೆಡಿಆರ್ಡಿಪಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು, ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮತ್ತಿತರರು ಸಹಕರಿಸಿದರು









