ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ ವಾರ್ಷಿಕ ಮಹಾಸಭೆ, ವಿಶ್ರಾಂತ ಸರಕಾರಿ ನೌಕರರು, ಸಾಧಕರ ಅಭಿನಂದನಾ ಸಮಾರಂಭ ಸಂಘದ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ರವಿವಾರ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು.
ಗೌರವ ಅತಿಥಿ ಮಾಜಿ ಸಚಿವ ಬಿ.ರಮಾನಾಥ ರೈಯವರು ಮಾತನಾಡಿ, ತಾನು ಸಾಮಾಜಿಕ ಜೀವನದಲ್ಲಿ ಶಾಸಕನಾಗಿ, ಸಚಿವನಾಗಿ ಪ್ರಸ್ತುತ ಮಾಜಿಯಾಗಿರುವ ಸಂದರ್ಭದಲ್ಲೂ ಸರಕಾರಿ ನೌಕರರ ಜತೆಗಿದ್ದು, ಮುಂದೆಯೂ ನಿಮ್ಮ ಜತೆಗಿರುತ್ತೇನೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಸಿಬಂದಿ ಕೊರತೆಯ ಕಾರಣಕ್ಕೆ ಸರಕಾರಿ ನೌಕರರು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಹೀಗಾಗಿ ಆರೋಗ್ಯದ ಕುರಿತು ಕಾಳಜಿ ಅತಿ ಅಗತ್ಯವಾಗಿದೆ. ನೌಕರರಿಗೆ ಒಪಿಎಸ್ ಸೌಲಭ್ಯ ಪಡೆಯಲು ಪ್ರಯತ್ನಗಳು ಅತಿ ಅಗತ್ಯವಾಗಿದೆ ಎಂದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಬಂಟ್ವಾಳ ತಾಲೂಕು
ಪಿಂಚಣಿದಾರರ ಸಂಘದ ಅಧ್ಯಕ್ಷ ಪಿ.ಲೋಕನಾಥ ಶೆಟ್ಟಿ, ತಾಲೂಕು ಸಂಘದ ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವು, ನಿವೃತ್ತ ಉಪನ್ಯಾಸಕ ಅಂಬಾಪ್ರಸಾದ್ ಮುಡಿಪು ವೇದಿಕೆಯಲ್ಲಿದ್ದರು.
ತಾಲೂಕು ಸಂಘದ ಗೌರವಾಧ್ಯಕ್ಷ ಶಮಂತ್ ಕುಮಾರ್, ಹಿರಿಯ ಉಪಾಧ್ಯಕ್ಷರಾದ ನಂದನ್ ಶೆಣೈ, ಯಮನಪ್ಪ, ಉಪಾಧ್ಯಕ್ಷರಾದ ರಮಾನಂದ, ಸೀತಾರಾಮ ಪೂಜಾರಿ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ತುಂಬೆ ಪ್ರಸ್ತಾವನೆಗೈದರು. ಖಜಾಂಚಿ ಬಸಯ್ಯ ಅಲಿಮಟ್ಟಿ ವಂದಿಸಿದರು. ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಯರಾಮ್, ಜನಾರ್ದನ್, ನವೀನ್ ಪಿ.ಎಸ್. ಕಾರ್ಯಕ್ರಮ ನಿರ್ವಹಿಸಿದರು.














