ಬ್ರಿಟಿಷರ ಕಾಲದ ಭಾರತೀಯ ದಂಡಸಂಹಿತೆ-1860, ಅಪರಾಧ ಪ್ರಕ್ರಿಯೆ ಕಾಯ್ದೆ-1898 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ 1872 ಅನ್ನು ಬದಲಿಸುವ ಹೊಸ ಮೂರು ಮಸೂದೆಗಳನ್ನು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದರು.
ಈ ಹೊಸ ಮಸೂದೆಯ ಪ್ರಕಾರ ದೇಶದ್ರೋಹ ಅಪರಾಧವನ್ನು ರದ್ದುಗೊಳಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ಪರಿಚರಿಸಲಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಪಕವಾಗಿ ಎದುರಿಸಲು ಹೊಸ ಶಿಕ್ಷೆಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಹೊಸ ನಿಯಮದ ಪ್ರಕಾರ ತನಿಖೆಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆ, ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಸಮನ್ಸ್
ಜಾರಿ ಮಾಡುವುದು, ಡಿಜಿಟಲ್ ದಾಖಲೆಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವ ಅವಕಾಶ ಇದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.
ಈ ರದ್ದಾಗುತ್ತಿರುವ ಕಾನೂನುಗಳು ಬ್ರಿಟಿಷರ ಆಡಳಿತವನ್ನು ರಕ್ಷಿಸಲು ಮತ್ತು ಬಲಪಡಿಸಲು ಶಿಕ್ಷಿಸುವುದಾಗಿತ್ತು. ನ್ಯಾಯವನ್ನು ಒದಗಿಸಲು ಅಲ್ಲ. ಇವುಗಳನ್ನು ಬದಲಾಯಿಸುವ ಮೂಲಕ ಹೊಸ ಮೂರು ಕಾನೂನುಗಳು ಕೇಂದ್ರ ಹಂತದಲ್ಲಿ ಭಾರತೀಯ ನಾಗರಿಕ ಹಕ್ಕುಗಳನ್ನು ರಕ್ಷಿಸುವ ಮನೋಭಾವವನ್ನು ತರುತ್ತವೆ ಎಂದು ಪ್ರತಿಪಾದಿಸಿದರು.















