ಸಹಕಾರ ಬ್ಯಾಂಕ್ ಠೇವಣಿದಾರರ ಸಭೆಯಲ್ಲಿ ಹೈಡ್ರಾಮಾ,ಸಂತ್ರಸ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸಭೆಯಿಂದ ಹೊರನಡೆದ ಸಂಸದ ತೇಜಸ್ವಿ ಸೂರ್ಯ.

Coastal Bulletin
ಸಹಕಾರ ಬ್ಯಾಂಕ್ ಠೇವಣಿದಾರರ ಸಭೆಯಲ್ಲಿ ಹೈಡ್ರಾಮಾ,ಸಂತ್ರಸ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸಭೆಯಿಂದ ಹೊರನಡೆದ ಸಂಸದ ತೇಜಸ್ವಿ ಸೂರ್ಯ.

ಬೆಂಗಳೂರು: ನಗರದ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ಹಣ ಕಳೆದುಕೊಂಡ ಠೇವಣಿದಾರರು, ಚುನಾವಣಾ ಪ್ರಚಾರಕ್ಕೆ ಬಂದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದು, ತೇಜಸ್ವಿ ಸೂರ್ಯ ಅವರು ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ನಿರ್ಗಮಿಸಿರುವುದು ಬೆಳಕಿಗೆ ಬಂದಿದೆ. ಠೇವಣಿದಾರರು ಬಸವನಗುಡಿ ಬಿಜೆಪಿ ಶಾಸಕ ಎಲ್‌ಎ ರವಿ ಸುಬ್ರಹ್ಮಣ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಗೆ ನಷ್ಟವನ್ನು ಭರಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಉತ್ತರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬಿಜೆಪಿ ನಾಯಕರು ಹೂಡಿಕೆದಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಠೇವಣಿದಾರರನ್ನು ತೃಪ್ತಿಪಡಿಸಲು ಸಾಧ್ಯವಾಗಿಲ್ಲ.

ಲಕ್ಷ್ಮಣರಾವ್‌ ಇಮಾಂದಾ‌ರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಬ್ಯಾಂಕ್ ಠೇವಣಿದಾರರ ಪ್ರಶ್ನೆಯಿಂದ ತಪ್ಪಿಸಿ ತೇಜಸ್ವಿ ಸೂರ್ಯ ಅವರು ಹೊರ ಹೋಗುತ್ತಿರುವುದು ಟ್ರೋಲ್ ಗೆ ಗುರಿಯಾಗಿದೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ ಠೇವಣಿದಾರರು, 'ನಮಗೆ ಅನ್ಯಾಯ ಮಾಡಿದ್ದೀರಿ, ನಮ್ಮ ಠೇವಣಿಯನ್ನು ವಾಪಸ್ ನೀಡಿ' ಎಂದು ಧಿಕ್ಕಾರ ಕೂಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ ಎಂದು ವರದಿಯಾಗಿದೆ.

ಎಪ್ರಿಲ್ 13ರಂದು ಸಂಜೆ ನಾಲ್ಕು ಗಂಟೆಗೆ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್‌ ಹಾಗೂ ಕೋಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯನ್ನು ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಅವರು ಕರೆದಿದ್ದರು. ಠೇವಣಿದಾರರ ಸಭೆಯಲ್ಲಿ ಉಂಟಾದ ಗದ್ದಲದ ವೇಳೆ ಪ್ರಶ್ನಿಸಿದ ಠೇವಣಿದಾರರನ್ನು ತೇಜಸ್ವಿ ಸೂರ್ಯ ಬೆಂಬಲಿಗರು ಎಳೆದಾಡಿ, ಹಲ್ಲೆ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಅಲ್ಲದೆ, ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಠೇವಣಿದಾರರ ಸಭೆ ಎಂದು ಕರೆದು, ತೇಜಸ್ವಿ ಸೂರ್ಯ ಅವರು ಚುನಾವಣಾ ವಿಷಯಗಳನ್ನು ಮಾತನಾಡಿದ್ದಾರೆ. ಸಂಸದರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಈ ಬಗ್ಗೆ ಅವರ ಮೇಲೆ ಕ್ರಮ ಜರುಗಿಸಬೇಕು ಎಂಬ ಕೂಗೂ ಕೇಳಿ ಬಂದಿದೆ.


ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ"ಎಮರ್ಜೆನ್ಸಿ ಎಕ್ಸಿಟ್ ಡೋರ್" ಮೂಲಕ ಜನರಿಂದ ಎಸ್ಕೆಪ್‌ ಆಗಿದ್ದಾರೆ!" ಎಂದು ಲೇವಡಿ ಮಾಡಿದೆ.

“ಬೆಂಗಳೂರು ದಕ್ಷಿಣದ ಸಂಸದ 5 ವರ್ಷದುದ್ದಕ್ಕೂ ದೋಸೆ ತಿಂದುಕೊಂಡು, ಫುಟ್ ಬಾಲ್ ಆಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆದಿದ್ದರು, ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಯನ್ನು ಒಂದು ದಿನವೂ ಆಲಿಸದ ತೇಜಸ್ವಿ ಸೂರ್ಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಮತದಾರರ ಮೇಲೆಯೇ ಹಲ್ಲೆ ನಿಂದನೆ ಮಾಡಲು ಮುಂದಾಗುವ ತೇಜಸ್ವಿ ಸೂರ್ಯನ ಪಟಾಲಂನ ದುರಹಂಕಾರ ಮಿತಿ ಮೀರಿದೆ, ಮತದಾರರು ಈ ಅಹಂಗೆ ಪಾಠ ಕಲಿಸುವ ಸಮಯ ಬಂದಿದೆ. ಎಲ್ಲಾ ಕಡೆಯೂ ಮತದಾರರಿಂದ ಬಿಜೆಪಿ ಅಭ್ಯರ್ಥಿಗಳು ಗೋಬ್ಯಾಕ್‌ ಎದುರಿಸುತ್ತಿದ್ದಾರೆ, ಈ ಜನಾಕ್ರೋಶಕ್ಕೆ ಬಿಜೆಪಿ ದೂಳಿಪಟ ಮಾಡುವುದು ನಿಶ್ಚಿತ" ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.

Leave a Comment