ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಪ್ರಕರಣ: ಅಧ್ಯಯನ ನಡೆಸಲು ಸರ್ಕಾರದಿಂದ ತಜ್ಞ ವೈದ್ಯರ ಸಮಿತಿ ರಚನೆ

Coastal Bulletin
ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಪ್ರಕರಣ: ಅಧ್ಯಯನ ನಡೆಸಲು ಸರ್ಕಾರದಿಂದ ತಜ್ಞ ವೈದ್ಯರ ಸಮಿತಿ ರಚನೆ

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಸಾವಿನ ಸರಣಿ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ವಿಶೇಷ ತಜ್ಞರ ಸಮಿತಿಯನ್ನು ರಚನೆ ಮಾಡಿದೆ.

ಹಾಸನ ಜಿಲ್ಲೆಯಲ್ಲಿ ಯುವಕರು ಮತ್ತು ಮಧ್ಯವಯಸ್ಸಿನವರು ಕಳೆದ ಒಂದು ತಿಂಗಳಲ್ಲಿ ಹೃದಯಾಘಾತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಸುನೀಗುತ್ತಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಹೃದಯಾಘಾತದ ಸರಣಿ ಸಾವಿನ ಘಟನೆಗಳಿಗೆ ಕಾರಣಗಳನ್ನು ತಿಳಿದುಕೊಂಡು ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸೋಮವಾರ (ಜೂ.30) ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೆಶಕ ಡಾ. ರವೀಂದ್ರನಾಥ್ ಅವರ ಜೊತೆ ಸಮಾಲೋಚನೆ ನಡೆಸಿ ವಿಶೇಷವಾಗಿ ಹಾಸನ ಜಿಲ್ಲೆಯ ಹೃದಯಾಘಾತ ಸಾವಿನ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ 10 ದಿನಗಳ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ರವೀಂದ್ರನಾಥ್ ಅವರು ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಸಾವಿನ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ತಜ್ಞರ ತಂಡದೊಂದಿಗೆ ಅಧ್ಯಯನ ನಡೆಸುವ ಸಂಬಂಧ

ಸಭೆ ನಡೆಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಸುದ್ದಿ ತಿಳಿದ ಬಳಿಕ ಆತಂಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಯದೇವ ಹೃದ್ರೋಗ ಆಸ್ಪತ್ರೆಗೆ ಧಾವಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಯದೇವ ಆಸ್ಪತ್ರೆಗೆ ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇಕಡ 5 ರಿಂದ 10 ರಷ್ಟು ಹೆಚ್ಚಳವಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ರವೀಂದ್ರನಾಥ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯಿಂದಲೂ ಸಭೆ: ಹಾಸನ ಜಿಲ್ಲೆಯಲ್ಲಿನ ಹೃದ್ರೋಗ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಇಂದು ತಜ್ಞರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಯುವಕರ ಮತ್ತು ಮಧ್ಯವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳ ಬಗ್ಗೆ ಸಮಾಲೋಚನೆ ನಡೆಸಿದರು.

Leave a Comment