ಕಾಸರಗೋಡು: ಹೆತ್ತ ತಾಯಿ ಮೇಲೆ ಮಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿರುವ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.
ವರ್ಕಾಡಿ ಮೂಲದ ಹೆಲ್ದಾರ (60) ಮಗನಿಂದಲೇ ಕೊಲೆಯಾದ ಮಹಿಳೆ. ಮೆಲ್ವಿನ್ ತಾಯಿಯನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ ಮಗ. ನಿನ್ನೆ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಲಾಟೆ ಕೇಳಿ ಮೆಲ್ವಿನ್ ಮೇಲೆ ಅನುಮಾನಗೊಂಡ ಚಿಕ್ಕಮ್ಮ ಮನೆಯಿಂದ ಹೊರ ಬಂದು ನೋಡಿದಾಗ ಮೆಲ್ವಿನ್ ತಾಯಿಯನ್ನೇ ಹತ್ಯೆ ಮಾಡಿ ಬೆಂಕಿ ಹಚ್ಚಿರುವುದು ಕಂಡುಬಂದಿದೆ.
ಚಿಕ್ಕಮ್ಮನ ಗಮನಕ್ಕೆ ಬಂದಿದ್ದು ಗೊತ್ತಾಗುತ್ತಿದ್ದಂತೆ ಮೆಲ್ವಿನ್, ಚಿಕ್ಕಮ್ಮ ಲೋಲಿಟಾ ಅವರ ಮೇಲೂ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.
ಲೋಲಿಟಾ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಹೊರಬಂದಿದ್ದಾರೆ. ನೆರೆಯ ನಿವಾಸಿಗಳು ಬರುತ್ತಿದ್ದಂತೆ ಮೆಲ್ವಿನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಲೋಲಿಟಾ ಅವರನ್ನು ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿ ಮಗನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.