Coastal Bulletin

ಕಾರ್ಕಳ: ಸಾವಿರಾರು ಹಿಂದೂ ಕಾರ್ಯಕರ್ತರ ನೋವಿನ ಧ್ವನಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾರ್ಕಳದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ.

ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅನೇಕ ತಿಂಗಳುಗಳಿಂದ 12 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು ವರದಿ ಸಲ್ಲಿಸಿದ್ದಾರೆ. ಆ ಕ್ಷೇತ್ರಗಳ ಪೈಕಿ ಕಾರ್ಕಳವನ್ನೇ ಅಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೋಕಳ್ಳತನ ಕಾರ್ಕಳ ಕ್ಷೇತ್ರದಲ್ಲೆ ನಡೆಯುತ್ತಿದೆ. ಇಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ರೌಡಿ ಶೀಟರ್ ಕೇಸುಗಳು ದಾಖಲಾಗಿವೆ ಹಿಂದೂ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದರು.

ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಾರು ಏನೇ ಒತ್ತಡ ಹಾಕಿದರೂ ನಾನು ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ, ಅವರ ಒತ್ತಡದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.

ನಾನು

ಬಿಜೆಪಿ ವಿರೋಧಿಯಲ್ಲ. ನಾನು ಮೋದಿ ಪರವಾಗಿ ಹಿಂದುತ್ವದ ಪರವಾಗಿದ್ದೇನೆ, ಗೆದ್ದ ನಂತರವೂ ನನ್ನ ಬೆಂಬಲ ಬಿಜೆಪಿಗೆ ಇರಲಿದೆ. ನನ್ನ ಸ್ಪರ್ಧೆ ಏನಿದ್ದರೂ ವ್ಯಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ದ, ಹಿಂದು ವಿರೋಧಿಗಳ ವಿರುದ್ಧ ಎಂದರು.

ಮುತಾಲಿಕ್ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಲಾಭ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪ್ರಶ್ನೆಯೇ ಇಲ್ಲ. ನಾನು ಎಂದಿಗೂ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದವ. ಇಲ್ಲಿ ನಾನು ಗೆಲ್ಲಬೇಕು, ಹಿಂದುತ್ವ ಗೆಲ್ಲಬೇಕು ಅಷ್ಟೇ ಎಂದರು.

ಉಡುಪಿ ಜಿಲ್ಲೆಯಲ್ಲಿ ಗೋ ಹತ್ಯೆಯಾಗುವ ನಂಬರ್ ಒಂದು ಜಾಗ ಇದ್ದರೆ ಅದು ಕಾರ್ಕಳ ಎನ್ನುತ್ತಿದ್ದಾರೆ. ಇವರಿಗೆ ಗೋ ಮಾತೆಯ ರಕ್ಷಣೆಗಾಗಿ ಅಧಿಕಾರ ಕೊಟ್ಟರೆ ಗೋಮಾತೆ ರಕ್ಷಣೆ ಆಗುತ್ತಿಲ್ಲ ಎಂದು ಟೀಕೆ ಮಾಡಿದರು

Leave a Comment