ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಬಾನುಲಿ ಸರಣಿ ಇತ್ತೀಚಿಗೆ ಶತಕದ ಗಡಿ ದಾಟಿದ್ದು ನೆನಪಿರಬೇಕಲ್ಲ? ಈ ಸಂಭ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟ್ರದ ಆಯ್ದ ಕಲಾವಿದರನ್ನು ಆಹ್ವಾನಿಸಿ ಮನ್ ಕೀ ಬಾತ್ ನೂರು ಆವೃತ್ತಿಯ ಸಾರಾಂಶವನ್ನು ಕಲಾಕೃತಿಗಳಲ್ಲಿ ಅರಳಿಸಿಡುವ ಸಾಹಸಕ್ಕೆ ಮುಂದಾಗಿತ್ತು. ಈ ಮಹತ್ವದ ಅವಕಾಶ ಪಡೆದ ರಾಷ್ಟ್ರದ 13 ಕಲಾವಿದರ ಪೈಕಿ ಒಬ್ಬರಾಗಿ ಪ್ರಧಾನಿಯವರ ವಸುದೈವ ಕುಟುಂಬಕಂ ಚಿಂತನೆಯ ವಿಶ್ವಭಾರತ ಕಲ್ಪನೆಯನ್ನು ತನ್ನ ಕಲಾಕೃತಿಯಲ್ಲಿ ಅರಳಿಸಿ ಮೋದಿಯವರ ಮನಗೆದ್ದ ಕಲಾವಿದ ನಮ್ಮ ಕರಾವಳಿ ಮೂಲದ ಮೂಡುಬಿದಿರೆಯ ಬಿ. ಮಂಜುನಾಥ ಕಾಮತ್ ಎನ್ನುವುದೇ ಗಮನಾರ್ಹ.
ಕಳೆದ ಮೂರು ತಿಂಗಳಿಂದ ಈ ಕಾರ್ಯ ಯೋಜನೆ ನಡೆದಿದ್ದು ಕಲಾಕಾರರಿಗೆ ಮನ್ ಕೀ ಬಾತ್ ಸರಣಿಯ ಚಿಂತನೆಗಳ ಸಾರಾಂಶವನ್ನು ಹದಿಮೂರು ಚಿಂತನೆಗಳಾಗಿ ನೀಡಲಾಗಿತ್ತು. ಇದೀಗ ಕಳೆದ ಕೆಲವು ದಿನಗಳ ಹಿಂದೆ ಕಲಾವಿದರ ಕಲಾಕೃತಿಗಳನ್ನೆಲ್ಲ ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮೋಡರ್ನ್ ಆರ್ಟ್ನಲ್ಲಿ 'ಜನಶಕ್ತಿ ಒಂದು ಸಾಂಘಿಕ ಸಾಮರ್ಥ್ಯ ' ಹೆಸರಲ್ಲಿ ಪ್ರದರ್ಶನಕ್ಕೆ ಇರಿಸಿದ್ದು ಸ್ವಚ್ಚತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಭಾರತ, ನಾರೀಶಕ್ತಿ, ಯೋಗ, ಆಯುರ್ವೇದ ಹೀಗೆ ವಿವಿಧ ಪರಿಕಲ್ಪನೆಯ ಕಲಾಕೃತಿಗಳು ಈ ಪ್ರದರ್ಶನ ವೀಕ್ಷಣೆಗೆಂದು ಮ್ಯೂಸಿಯಂನತ್ತ ಹೆಜ್ಜೆ ಹಾಕಿದ ಪ್ರಧಾನಿ ಮೋದಿಯವರನ್ನೇ ಮೋಡಿ ಮಾಡಿವೆ. ಕಲಾವಿದರ ಸಹಿಗಳಿರುವ ಕ್ಯಾಟಲಾಗ್ಗೆ ಹಸ್ತಾಕ್ಷರ ನೀಡಿರುವ ಪ್ರಧಾನಿ ಮನದ ಯಾತ್ರೆಯು ಸಂತಸಮಯವಾಗಿರಲಿ ಎಂದು ಹಾರೈಸಿದ್ದಾರೆ.
ವರಾಹ ರೂಪಂ!
ಭೂಮಿ ಗುಂಡಗಿದೆ ಎನ್ನುವುದನ್ನು ವರಾಹಾವತಾರದಲ್ಲಿ ಗೋಲಾಕಾರದ ಭೂಮಿಯನ್ನೆತ್ತಿದ ನಮ್ಮ ಪೌರಾಣಿಕ ಚರಿತ್ರೆಯ ಚಿತ್ರಗಳೇ ಸಾರಿವೆ. ಗ್ರಹಣಗಳ ಕಲ್ಪನೆಯನ್ನು ರಾಹು ಕೇತುಗಳು ನುಂಗುವ ಚಂದ್ರ, ಸೂರ್ಯ, ವಿಶ್ವರೂಪಿ ಪರಮಾತ್ಮನ ಚಿತ್ರಣದ ಮೂಲಕ ಭಗವಂತನೆಂಬ ಅಗೋಚರ ಮಹತ್ವದ ಶಕ್ತಿ ಹೀಗೆ ಚಿತ್ರಿಸಿ ಜಗತ್ತಿಗೇ ಮೊದಲ ತಿಳುವಳಿಕೆ ನೀಡಿದ ಭಾರತ ಜಗದ್ವಂದ್ಯ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿವೆ. ವಿಶ್ವಕ್ಕೆ ಭಾರತ ಹೇಗೆ ಮಹತ್ವದ್ದು ಎನ್ನುವ ಮೋದಿಜಿಯವರ ಚಿಂತನೆ, ನಮ್ಮ ಐತಿಹಾಸಿಕ ಹಿನ್ನೆಲೆಯ ಥೀಮ್ ಆಯ್ದುಕೊಂಡು ಕಲಾಕೃತಿ ರಚಿಸಿದ್ದೆ. ಕಲೆಯಲ್ಲಿ ವಿಶೇಷ ಆಸಕ್ತಿಯಿರುವ ಮೋದಿಜಿಯವರು ಸಾಕಷ್ಟು ಕುತೂಹಲದಿಂದಲೇ ನನ್ನ ಕಲಾಕೃತಿಯಲ್ಲಿ ಅಡಗಿರುವ ಸೂಕ್ಷ್ಮಗಳನ್ನು ವಿಚಾರಿಸಿ ತಿಳಿದುಕೊಂಡು ಸಂತಸಪಟ್ಟರು ಎಂದು ಮಂಜುನಾಥ್ ವಿವರಿಸಿದರು.
ಪೈಂಟಿಂಗ್ ನಮ್ಮ ಭಾಷೆ. ಚಿತ್ರವೊಂದು ಸಾವಿರ ಶಬ್ದಗಳಿಗೆ ಸಮ. ಮೋಡರ್ನ್ ಆರ್ಟ್ ಅರ್ಥವಾಗದವರಿಗೆ ಬರೇ ಬಣ್ಣಗಳನ್ನು ಮೆತ್ತಿದ ಭಾವನೆ ಮೂಡಿಸಬಹುದು. ಆದರೆ ಕಲೆ, ಸಾಹಿತ್ಯ ಪ್ರಕಾರಗಳಿಗೆ ಅದರದ್ದೇ ಭಾಷೆಯಿದೆ. ಅದನ್ನು ಅರಿತುಕೊಂಡಾಗಲೇ ಕಾವ್ಯದ ಹಿಂದಿರುವ ಕಲ್ಪನೆ, ಚಿತ್ರದ ಹಿನ್ನೆಲೆ, ಕಲಾವಿದನ ಕಲ್ಪನೆಯ ಆಳದ ಪರಿಚಯವಾಗುತ್ತದೆ ಎನ್ನುವ ಮಂಜುನಾಥ್ ಈಗ ರಾಷ್ಟ್ರಮಟ್ಟದ ಗಡಿದಾಟಿ ಬೆಳೆದಿರುವ ಮಾನ್ಯತೆಯ ಕಲಾಕಾರ.
ಓಡಿ ಹೋಗಿದ್ದ ಪ್ರತಿಭೆ!
ಬಾಲ್ಯದಲ್ಲೇ ತಾನೋರ್ವ ಕಲಾಕಾರನಾಗಬೇಕೆಂಬ ತುಡಿತವಿದ್ದ ಮೂಡುಬಿದಿರೆಯ ಮಂಜುನಾಥ್ ಕಾಮತ್ ಆಗ ಮೃಣ್ಮಯ ಗಣಪತಿ, ಪೋಸ್ಟರ್ ಬರೆಯುವಲ್ಲಿ ಪಳಗಿದ್ದ ವೇದವ್ಯಾಸ
ಭಟ್ಟರಲ್ಲಿಂದ ಆವೆಮಣ್ಣು ತಂದು ಆಕೃತಿ ಮೂಡಿಸುತ್ತಿದ್ದ ಎಳೆಯ ಪ್ರತಿಭೆ. ಕಲೆ ಎಂದರೆ ಕೇಳುವವರಿಲ್ಲದ ಅಂದಿನ ವಾತಾವರಣದಲ್ಲೂ ಕನಸಿನ ಬೆನ್ನೇರಿ ಮೈಸೂರಿನಲ್ಲಿ 5 ವರ್ಷಗಳ ಬಿಎಫ್ಸಿ ಪದವಿ ಪೂರೈಸಿ ಹೆತ್ತವರಿಗೂ ಹೇಳದೇ ಡೆಲ್ಲಿಗೆ ಹಾರಿದ್ದೇ ಮಂಜು ಬದುಕಿನ ಟರ್ನಿಂಗ್ ಪಾಯಿಂಟ್!
ಅಲ್ಲಿ ಮಂಡಿ ಹೌಸ್ ಒಡನಾಟ, ಇಕಾನಮಿಕ್ ಟೈಮ್ಸ್ಗೆ ರೇಖಾಚಿತ್ರಕಾರನಾಗಿ ಬದುಕು ಕಟ್ಟಿಕೊಂಡು ಬ್ರಿಟೀಷ್ ಸ್ಕಾಲರ್ಶಿಪ್ ಸೆಳೆದು ಲಂಡನ್ನಲ್ಲೂ ಒಂದು ವರ್ಷದ ಕಲಿಕೆಯಲ್ಲಿ ಕಲಾಕಾರನೋರ್ವ ಅರಳಿದ್ದ.
ಮಂಜು ಮಾರ್ಡನ್ ಮೋಡರ್ನ್ ಆರ್ಟ್ನಲ್ಲಿಂದು ಹೆಸರಾಂತ ಕಲಾವಿದ. ದೆಹಲಿಯ ಎಸ್ಸ್ಪೇಸ್, ಮುಂಬೈನ ಸಾಕ್ಷಿ ಗ್ಯಾಲರಿಗಳ ಮೂಲಕ ಅವರ ಕಲಾಕೃತಿಗಳು ಜಗದಗಲ ಹರಿದಾಡುತ್ತಿವೆ. ಚಿತ್ರಕಾರ, ಕಲಾವಿದರು ಬದುಕು ಕಟ್ಟಿಕೊಳ್ಳುವುದು ಕನಸಿನ ಮಾತು ಎಂಬ ಆ ಪರಿಸ್ಥಿತಿಯಲ್ಲೂ ಬಾಳ ಸಂಗಾತಿಯಾದ ಸೂರ್ಯಪ್ರದ, ಹೆಣ್ಣು ಕೊಟ್ಟ ಮಾವ ಮೂಡುಬಿದಿರೆಯ ಹಿರಿಯ ಪತ್ರಿಕಾ ವಿತರಕ ಸಹಕಾರಿ ಧುರೀಣ ದಯಾನಂದ ಪೈ ಅವರ ಪ್ರೋತ್ಸಾಹವನ್ನೂ ಮರೆಯಲಾಗದು ಅಂತಾರೆ ಮಂಜುನಾಥ್. ಇಬ್ಬರು ಮಕ್ಕಳ ಪೈಕಿ ಹಿರಿಯಾಕೆ ಮಾನ್ಯಳಿಗೆ ಕಲಾಶಿಕ್ಷಣದ ಈ ಮೊದಲ ವರ್ಷವೇ ಜಾಬ್ ಆಫರ್ ಗಿಟ್ಟಿಸುವ ಮಟ್ಟಕ್ಕೆ ಈಗ ಅವಕಾಶಗಳಿವೆ. ಕಿರಿಯಾಕೆ ಆದ್ಯ. ಕನರ್ಾಟಕ ಮೂಲದ ಕಲಾಕಾರರೆಲ್ಲ ನೆಂಟಸ್ತಿಕೆಯೇ ಬಾರದೇ ಉತ್ತರ ಭಾರತದ ಹುಡುಗಿಯರನ್ನು ವರಿಸಿದ ವಾಸ್ತವವನ್ನೂ ಅವರು ವಿಷಾದಪೂರ್ವಕ ವಿವರಿಸುತ್ತಾರೆ.
ಮೂಲತಃ ಬಂಟ್ವಾಳದವರಾದ ಪುಂಡಲೀಕ ಕಾಮತ್- ಪ್ರಫುಲ್ಲಾ ದಂಪತಿಯ ಓರ್ವ ಪುತ್ರಿ, ಪುತ್ರನ ಪೈಕಿ ಮಂಜು ಸಾಗಿ ಬಂದ ಸಾಧನೆಯ ಹಾದಿ ಹೆತ್ತವರನ್ನೇ ಬೆರಗಾಗಿಸಿದೆ. ಬಾಲ್ಯದಲ್ಲಿ ಕಲಿತ ಮೂಡುಬಿದಿರೆಯ ಡಿಜೆ ಶಾಲೆ, ಮಹಾವೀರ ಕಾಲೇಜು,ರೋಶನ್ ಲೈಬ್ರರಿಯ ಅಬ್ದುಲ್ ಸಲಾಂರಂತಹ ಹಿತೈಶಿಗಳ ಮಾರ್ಗದರ್ಶನ, ಮಂಗಳೂರಿನ ಕೆನರಾ ಹೈಸ್ಕೂಲ್ನ ಆ ದಿನಗಳು ಎಲ್ಲವೂ ಬದುಕಿನ ವಿಶೇಷ ಕ್ಷಣಗಳು ಎನ್ನುವ ಮಂಜುನಾಥ್ ಆಗಿ ಹೋದ ಬಗ್ಗೆ ಚಿಂತಿಸದೇ ವರ್ತಮಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಅದೇ ಉತ್ತಮ ಭವಿಷ್ಯವಾಗುತ್ತದೆ ಎನ್ನುವ ನಿಲುವಿನವರು.
ವಿಶೇಷ ಎಂಬಂತೆ *ಮೇ 22ರ ಸೋಮವಾರ ಈ ದಿನ 52ರ ಬರ್ತ್ ಡೇ ಸಂಭ್ರಮ* ದಲ್ಲಿರುವ ಮಂಜುನಾಥ್ ಹುಟ್ಟೂರಿನ ಭಾಗದಲ್ಲಿ ಕಲೆ, ಸಾಹಿತ್ಯ, ಆಡಳಿತ ಸೇವೆ, ಸಂಸ್ಕೃತಿ ಹೀಗೆ ಯುವ ಪ್ರತಿಭೆಗಳಿಗೆ ವೇದಿಕೆಯಾಗಿ ಆರ್ಟಿಸ್ಟ್ ರೆಸಿಡೆನ್ಸಿ ಮಾದರಿಯಲ್ಲಿ ಸ್ಫೂರ್ತಿ ಕೇಂದ್ರವೊಂದನ್ನು ಕಟ್ಟಬೇಕೆಂಬ ಚಿಂತನೆಯನ್ನೂ ಹೊಂದಿದ್ದಾರೆ.















