ಕಾಸರಗೋಡು ಜಿಲ್ಲೆ ಅಡೂರು ಕನ್ನಡ ಶಾಲೆಗೆ ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿರುವುದು ಸಂತಸ ತಂದಿದೆ ಎಂದು ಕನ್ನ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನ್ನಡ ವಿಭಾಗಕ್ಕೆ ಮಲಯಾಳಿ ಶಿಕ್ಷಕಿಯನ್ನು ನೇಮಕ ಮಾಡಿರುವುದಕ್ಕೆ ಕೇರಳ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇರಳ ಉಚ್ಛ ನ್ಯಾಯಾಲಯ, ಅಲ್ಲಿಗೆ ಕೂಡಲೇ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಕ ಮಾಡುವಂತೆ ಆದೇಶಿಸಿದೆ. ಇದರಿಂದ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆ ಪರಿಹಾರವಾದಂತಾಗಿದೆ. ಜೊತೆಗೆ ಕೆಲವು ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರಕಾರ, ಶಿಕ್ಷಣ ಇಲಾಖೆ ಹಾಗೂ ಕೇರಳ ಲೋಕಸೇವಾ ಆಯೋಗಕ್ಕೆ ಅತೀ ದೊಡ್ಡ ಹಿನ್ನಡೆ ಉಂಟಾಗಿದೆ.
ಮಲಯಾಳಿ ಭಾಷಿಕ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸುವುದು ಕಷ್ಟ ಎಂದು ಅರ್ಥೈಸಿಕೊಂಡ ನ್ಯಾಯಾಲಯ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತಕ್ಷಣವೇ ಅವರ ಸ್ಥಾನಕ್ಕೆ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.