ಮೈಸೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 3 ದಿನಗಳ ನಂತರ ಮಂಗಳವಾರ ಒಂದೇ ದಿನ ಸಾಲಬಾಧೆಯನ್ನು ತಾಳಲಾರದೇ ಮೈಸೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ತಲಾ ಒಬ್ಬ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರೈತನನ್ನು ಯಾಲಕ್ಕಿಗೌಡ (62) ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉಡುವೆಪುರದಲ್ಲಿ ಘಟನೆ ನಡೆದಿದೆ. ಕಳೆದ ಎರಡು ವರ್ಷದಿಂದ ಉಂಟಾಗುತ್ತಿದ್ದ ಬೆಳೆಹಾನಿಯಿಂದ ತಾವು ಮಾಡಿಕೊಂಡಿದ್ದ ಸಾಲವನ್ನು ಕಟ್ಟಲಾಗದೇ ತೀವ್ರ ಹತಾಶೆಗೊಂಡಿದ್ದರು. ಜೊತೆಗೆ, ಸಾಲಗಾರರು ಮನೆಯ ಬಳಿ ಬಂದು ಸಾಲವನ್ನು ಕೇಳುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾಲಕ್ಕಿಗೌಡ ಕೃಷಿ ಚಟುವಟಿಕೆಗಾಗಿ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ ಐಓಬಿ ಬ್ಯಾಂಕಿನಲ್ಲಿ ಟ2 ಲಕ್ಷ ರೂ. ಹಾಗೂ ಗ್ರಾಮದಲ್ಲಿ ಖಾಸಗಿಯಾಗಿ 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಆದರೆ, ಸಾಲ ತೀರಿಸಲಾಗದೇ ಈಗ ಲೋಕವನ್ನೇ ಬಿಟ್ಟು ಹೋಗಿದ್ದಾರೆ.
ಮತ್ತೊಂದೆಡೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಘಟನೆ ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತ ರೈತನನ್ನು ಕನ್ನೆಳ್ಳಿ ಗ್ರಾಮದ ಅಮರಣ್ಣ ಕುಂಬಾರ (60) ಎಂದು ಗುರುತಿಸಲಾಗಿದೆ. ಬ್ಯಾಂಕ್ ಹಾಗೂ ಖಾಸಗಿ ಸೇರಿದಂತೆ ಸುಮಾರು 10 ಲಕ್ಷ ರೂ. ಸಾಲ ಮಾಡಿದ್ದ ರೈತ ಅಮರಣ್ಣ, ಸಾಲ ತೀರಿಸಲಾಗದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.