ಕಾವೇರಿ ವಿವಾದ ಹೆಚ್ಚುತ್ತಿರುವ ಪ್ರತಿಭಟನೆಗಳು- ಅಪ್ಪನಂತೆಯೇ ಪ್ರತಿಭಟನೆ ಮಾಡುತ್ತಿರುವ ಅಭಿಷೇಕ್ ಅಂಬರೀಶ್.

Coastal Bulletin
ಕಾವೇರಿ ವಿವಾದ ಹೆಚ್ಚುತ್ತಿರುವ ಪ್ರತಿಭಟನೆಗಳು- ಅಪ್ಪನಂತೆಯೇ ಪ್ರತಿಭಟನೆ ಮಾಡುತ್ತಿರುವ ಅಭಿಷೇಕ್ ಅಂಬರೀಶ್.

ಮಂಡ್ಯ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಮಂಡ್ಯದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಕಾವೇರಿ ನೀರಿಗಾಗಿ ತಮ್ಮ ಪದವಿಯನ್ನೇ ತ್ಯಾಗ ಮಾಡಿದ್ದ ಮಂಡ್ಯದ ಗಂಡು ಅಂಬರೀಶ್ ಪುತ್ರ ಅಭಿಷೇಕ್‌ ಅಂಬರೀಶ್‌ ಮಂಡ್ಯದ ರೈತರಿಗೆ ಬೆಂಬಲ ನೀಡಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅಭಿಷೇಕ್‌ ಅಂಬರೀಶ್‌ ಅವರು, ನಾನು ಯುವಕನಾಗಿದ್ದೀನಿ. ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿ ಬಂದಿಲ್ಲ. ನಾನು ಚಿಕ್ಕದ್ದಿನಿಂದಾಗಲೂ ಕಾವೇರಿ ಹೋರಾಟ ನೋಡಿ ಬೆಳೆದವನು. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ಪರ ಹೋರಾಟ ಮಾಡಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವ ಕೆಲಸವನ್ನ ಅಮ್ಮ ಮಾಡ್ತಾರೆ. ನಮ್ಮ ನೀರು ಬಿಟ್ರೆ ಮುಂದೆ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ. ನಮ್ಮ ನೀರು, ಜನಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಕನ್ನಡ ಚಿತ್ರರಂಗ ಕಾವೇರಿ ವಿಚಾರದಲ್ಲಿ ಯಾವಾಗಲೂ ಬೆಂಬಲವಾಗಿ ಇದ್ದೇ ಇರುತ್ತದೆ. ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ. ನಮ್ಮ ಬಳಿ ನೀರು ಇದ್ರೆ ತಮಿಳುನಾಡಿನವರು ನೀರು ಕೇಳಲಿ. ನಮ್ಮ ಬಳಿಯೇ ನೀರು ಇಲ್ಲದಿದ್ದಾಗ ಅವರಿಗೆ ನೀರು ಕೋಡೊದು ಹೇಗೆ.? ಎರಡೂ ರಾಜ್ಯ ಸರ್ಕಾರಗಳು ಕೂತು ಮಾತನಾಡಬೇಕು. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಪ್ರತಿಭಟನೆಯಲ್ಲಿ ನಟ ಅಭಿಷೇಕ್ ಅಂಬರೀಶ್ ಹೇಳಿದರು.

Leave a Comment