ನವದೆಹಲಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗುತ್ತಿದ್ದಂತೆ ಭಾರೀ ಹಿಂಸಾಚಾರ ಶುರವಾಗಿದೆ. ಖಾನ್ ಅವರ ಬಂಧನ ಖಂಡಿಸಿ ಅವರ ಬೆಂಬಲಿಗರು ಪಾಕಿಸ್ತಾನದಾದ್ಯಂತ ತೀವ್ರ ಪ್ರತಿಭಟನೆ ನಡೆಸಿ ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಪೊಲೀಸ್ ವಾಹನಗಳು ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಿಗೆ ಹಚ್ಚಿದ್ದಾರೆ. ಇದರಿಂದ ಕೆಲವಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕಿಸ್ತಾನದ ಹಲವಡೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸರು, ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿದ್ದಾರೆ. ರೇಡಿಯಾ ಪಾಕಿಸ್ತಾನ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಗುಂಪುಗಳನ್ನು ತಡೆಯಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಂದು (ಮೇ 9, ಮಂಗಳವಾರ) ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ಅರೆಸೇನಾ ಪಡೆಗಳು ಬಂಧಿಸಿದ್ದವು.
ಇಮ್ರಾನ್ ಖಾನ್ ಅವರನ್ನು ಸುತ್ತುವರೆದಿರುವ ಅರೆಸೇನಾಪಡೆ ಸಿಬ್ಬಂದಿ ಗುಂಪು ಬಂಧಿಸಿ ವಾಹನಕ್ಕೆ ಹತ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಧನದ ವೇಳೆ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅವರ ಬೆಂಬಲಿಗರು ಪಾಕಿಸ್ತಾನದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.