ಹಾಸನ: " ಅರ್ಜುನ ಆನೆಯನ್ನು ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ " ಎಂದು ಅರಣ್ಯ ಇಲಾಖೆಗೆ ಧಿಕ್ಕಾರ ಹಾಕುತ್ತಾ ಸ್ಥಳೀಯರು ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ ನಡೆಸಿದರು.
ಒಂಟಿ ಸಲಗ ಸೆರೆ ಕಾರ್ಯಾಚರಣೆಯ ವೇಳೆ ಮೃತಪಟ್ಟಿದ್ದ ಅರ್ಜುನ ಆನೆಯನ್ನು ಮೃತಪಟ್ಟ ಸ್ಥಳ ಹಾಸನದ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡು ತೋಪಿನಲ್ಲಿಯೇ ಗುಂಡಿ ತೋಡಿಸಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯರು ಹಾಗೂ ಮಾವುತರು ವಿರೋಧ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಅಚಾತುರ್ಯದಿಂದ ಅರ್ಜುನ ಆನೆ ಸಾವಾಗಿದೆ. ಆನೆಯ ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಅಂದರೆ, ಆನೆ ಹುಟ್ಟಿ ಬೆಳೆದ ಬಳ್ಳೆ ಸಾಕಾನೆ ಶಿಬಿರದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡುವ ಮೂಲಕ ನ್ಯಾಯ ಒದಗಿಸಿ ಎಂದು ಮಾವುತವು ಹಾಗೂ ಸ್ಥಳೀಯರು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಆದರೂ, ಅರಣ್ಯ ಇಲಾಖೆ ಕಿವಿಗೊಡದೇ ಅಂತ್ಯ ಸಂಸ್ಕಾರ ಮಾಡಿದೆ. ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆಗೆ ಆಗ್ರಹಿಸಿದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಓಡಿಸಿದ್ದಾರೆ.
ಅರ್ಜುನ ಆನೆ ಸಾವಿನ ಬಗ್ಗೆ ಮಾವುತರೊಬ್ಬರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ ಸೆರೆ ಹಿಡಿಯಬೇಕಿದ್ದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಇಂಜೆಕ್ಷನ್ ಶೂಟ್ ಮಾಡಲಾಗಿತ್ತು. ಅದು ಗುರಿ ತಪ್ಪಿ ಪ್ರಶಾಂತ್ ಎಂಬ ಸಾಕಾನೆ ಮೇಲೆ ಬಿತ್ತು. ನಂತರ, ಬೇರೊಂದು ಇಂಜೆಕ್ಷನ್ ನೀಡಿ ಅದನ್ನು ಸುಧಾರಿಸಲಾಯಿತು. ಆ ವೇಳೆಗೆ, ಕಾಡಾನೆ ಮೇಲೆ ಅರ್ಜುನ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆ ಗುಂಡು ಅಚಾನಕ್ಕಾಗಿ ಅರ್ಜುನನ ಕಾಲಿಗೆ ಬಿದ್ದಿತು.ಗುಂಡು ತಗುಲಿದ್ದರಿಂದ ಅರ್ಜುನ ಸುತ್ತಮುತ್ತಲಿದ್ದ ಮರಗಳನ್ನು ಬೀಳಿಸಿತು. ಅರ್ಜುನ ಆನೆ ನಡೆಯಲಾಗದ ಪರಿಸ್ಥಿತಿಯಲ್ಲಿತ್ತು. ಈ ವೇಳೆ, ಸೆರೆ ಹಿಡಿಯಬೇಕಿದ್ದ ಕಾಡಾನೆಯೇ ಅರ್ಜುನನ ಮೇಲೆ ದಾಳಿ ಮಾಡಿತು” ಎಂದು ಮಾವುತ ವಿಡಿಯೋದಲ್ಲಿ ಹೇಳಿದ್ದಾರೆ.
ವನ್ಯಜೀವಿ ಪ್ರಿಯರು ಹಾಗೂ ಹೋರಾಟಗಾರರು ಅರ್ಜುನ ಆನೆಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಂಗಳವಾರ ಸಂಜೆ 4ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 'ಅಂಬಾರಿ ಆನೆ ಅರ್ಜುನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷ ಆಗಬೇಕು' ಎಂದು ಆಗ್ರಹಿಸಿದ್ದಾರೆ.