ಬೆಂಗಳೂರು : ₹ 1000 ಕೋಟಿ ಬೆಲೆ ಬಾಳುವ 25 ಎಕರೆ ಭೂಹಗರಣದಲ್ಲಿ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಮಾಜಿ ಕಂದಾಯ ಸಚಿವ ಆರ್. ಅಶೋಕ್, ಮಹದೇವಪುರ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಈ ಬೃಹತ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇಡೀ ಜಗತ್ತಿನಲ್ಲೇ ಭೂಮಾಫಿಯಾದಲ್ಲಿ ಬೆಂಗಳೂರಿನ ರಾಜಕಾರಣಿಗಳು ಮೊದಲ ಸ್ಥಾನ ಪಡೆಯುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಮೋಹನ್ ದಾಸರಿ ದಾಖಲೆಯೊಂದಿಗೆ ಗಂಭೀರ ಆರೋಪ ಮಾಡಿದರು.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಂಗಳೂರಿನ ಹತ್ತಾರು ಎಕರೆ ಕೆರೆ ಸಂಪೂರ್ಣ ಭೂಮಾಫಿಯಾಗಳ ಹಿಡಿತಕ್ಕೆ ಸಿಕ್ಕಿದೆ. ಇದರಲ್ಲಿ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಇದೀಗ ದಾಖಲೆ ಸಹ ಬಿಡುಗಡೆ ಮಾಡಲಾಗಿದೆ.
₹1000 ಕೋಟಿ ಬೆಲೆಬಾಳುವ 25 ಎಕರೆ ಜುನ್ನಸಂದ್ರ ಕೆರೆ ಸಂಪೂರ್ಣ ಭೂಮಾಫಿಯಾಗಳ ಹಿಡಿತದಲ್ಲಿದೆ. ಇದರಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಮೋಹನ್ ದಾಸರಿ ಅವರು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜತೆಗೆ ಹಗರಣ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.
ಈ ಭೂಹಗರಣದಲ್ಲಿ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಮಾಜಿ ಕಂದಾಯ ಸಚಿವ ಆರ್. ಅಶೋಕ್, ಮಹದೇವಪುರ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಈ ಬೃಹತ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇಡೀ ಜಗತ್ತಿನಲ್ಲೇ ಭೂಮಾಫಿಯಾದಲ್ಲಿ ಬೆಂಗಳೂರಿನ ರಾಜಕಾರಣಿಗಳು ಮೊದಲ ಸ್ಥಾನ ಪಡೆಯುತ್ತಾರೆ ಎಂದು ದಾಸರಿ ಗಂಭೀರ ಆರೋಪ ಮಾಡಿದರು.
ಜುನ್ನಸಂದ್ರದ ಆರ್‌ಟಿಸಿ ಸರ್ವೆ ನಂ. 32 ರ ಅಡಿ 24.33 ಎಕರೆ ಸರ್ಕಾರಿ ಕೆರೆ ಅಂಗಳವನ್ನು ನಕಲಿ ದಾಖಲೆಗಳನ್ನು ಸಲ್ಲಿಸಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. 1930ರಲ್ಲಿ ಜೋಡಿದಾರ ಅಕ್ಕಮ್ಮ ಎಂಬುವವರಿಗೆ ಜುನ್ನಸಂದ್ರ ಕೆರೆಯನ್ನು ನಿರ್ವಹಣೆ ಸಲುವಾಗಿ ಅಂದಿನ ಮೈಸೂರು ಮಹಾರಾಜರು ಒಪ್ಪಂದ ಮಾಡಿಕೊಂಡಿದ್ದರು.
ಆದರೆ 1967ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಾದಾಗ, ಉಳುವವನೇ ಹೊಲದೊಡೆಯ ಎಂಬ ನಿಯಮ ಅನುಷ್ಠಾನಗೊಂಡ ಸಂದರ್ಭ ನಕಲಿ ದಾಖಲೆಗಳನ್ನು ನೀಡಿ ಜುನ್ನಸಂದ್ರ ಕೆರೆ ಭೂಮಿಯನ್ನು ಅಕ್ಕಮ್ಮ ಅವರ ಕುಟುಂಬಸ್ಥರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗುವ, ಸಾರ್ವಜನಿಕ ಆಸ್ತಿಯಾದ ಜುನ್ನಸಂದ್ರ ಕೆರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. 2023 ಡಿಸೆಂಬರ್ 21ರಂದು ಹೈಕೋರ್ಟ್ ಮಹಾರಾಜರ ಜೊತೆಗಿನ 1930ರ ಒಪ್ಪಂದವನ್ನು ಎತ್ತಿಹಿಡಿದಿದೆ.
ಜೋಡಿದಾರ ವಂಶಸ್ಥರಿಗೆ
ಭೂಮಿ ಸೇರಬೇಕು ಎಂದು ಆದೇಶ ನೀಡಿದೆ. ಆದರೆ ಕೋರ್ಟ್‌ನಲ್ಲಿ ದಾಖಲೆಗಳನ್ನು ಸಲ್ಲಿಸುವ ಸಂದರ್ಭ ಕೆರೆ ಅಂಗಳ ಎಂಬುದನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಕೋರ್ಟ್ ಆದೇಶದಲ್ಲಿಯೂ ಕೆರೆ ಅಂಗಳ ಅಕ್ಕಮ್ಮ ವಂಶಸ್ಥರಿಗೆ ಸೇರಬೇಕು ಎಂದು ಹೇಳಿಲ್ಲ. ಸುಳ್ಳು ದಾಖಲೆ ನೀಡಿ ನ್ಯಾಯಾಲಯದ ದಿಕ್ಕು ತಪ್ಪಿಸಲಾಗಿದೆ ಎಂದರು.
2014ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಮಾಧ್ಯಮ ವರದಿಗಳ ಬಗ್ಗೆ ಉಲ್ಲೇಖಿಸಿದ ಅವರು, ಆಗಲೇ ಜುನ್ನಸಂದ್ರ ಕೆರೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತ್ತು. 2021ರಲ್ಲಿ ಈ ಕೆರೆ ಉಳಿಸಲು ಆಮ್ ಆದ್ಮಿ ಪಕ್ಷ ಹೋರಾಟಕ್ಕೆ ಮುಂದಾಗಿದ್ದಾಗ, ತಡೆಯುವ ಪ್ರಯತ್ನ ಮಾಡಿದ್ದರು. ಅಂದಿನ ಶಾಸಕರಾಗಿದ್ದ ಅರವಿಂದ ಲಿಂಬಾವಳಿ, ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಮತ್ತು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಇವರೆಲ್ಲಾ ಸೇರಿ ₹1000 ಕೋಟಿ ಬೆಲೆ ಬಾಳುವ ಜಾಗವನ್ನು ಖಾಸಗಿಯವರಿಗೆ ನೀಡಿ ತಮ್ಮ ಕಮಿಷನ್ ಪಡೆದುಕೊಂಡಿದ್ದಾರೆ ಎಂದು ಮೋಹನ್ ದಾಸರಿ ಆಪಾದಿಸಿದರು.
ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರವಿಂದ ಲಿಂಬಾವಳಿ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾನೂನು ಹೋರಾಟದ ಮೂಲಕ ಮತ್ತೆ ಕೆರೆಯನ್ನು ಉಳಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯನವರಿಗೆ ಆಗ್ರಹಿಸಿದರು.
ಸರ್ಕಾರಿ ಕೆರೆಯನ್ನು ಉಳಿಸಿ ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ಕೆಂಪೇಗೌಡರು ಕಟ್ಟಿದ್ದ ಕೆರೆಗಳನ್ನು ಹೇಗೆ ರಿಯಲ್ ಎಸ್ಟೇಟ್ ಮಾಫಿಯಾಗಳು ಹಾಳು ಮಾಡುತ್ತಿವೆ ಎನ್ನುವುದು ಆತಂಕ ಮೂಡಿಸುತ್ತಿದೆ. ಈ ಹಗರಣದಲ್ಲಿ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ, ಈ ವಿಚಾರದಲ್ಲಿ ಹೋರಾಡುತ್ತಿರುವ ಅಶೋಕ ಮೃತ್ಯುಂಜಯ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದರು.
ಭೂ ಅಕ್ರಮ ಒತ್ತುವರಿ ವಿಚಾರವಾಗಿ ಬಿಎಂಟಿಎಫ್‌ಗೆ ದೂರು ನೀಡಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೆರೆ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿಲ್ಲ ಎಂದು ಎಎಪಿ ಮುಖಂಡ ಅಶೋಕ ಮೃತ್ಯುಂಜಯ ಅಳಲು ತೋಡಿಕೊಂಡರು.