ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಮೊದಲ ಸಾವಾಗಿದ್ದು, ಕೆಎಫ್‌ಡಿ ವೈರಸ್ ಮೊದಲ ಬಲಿ ಪಡೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನೇ ದಿನೇ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರದಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಮೂರು ದಿನಗಳ ಕಾಲ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಅವರು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ದಾಖಲಾಗಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾಗಿದ್ದಾರೆ.
ಶೃಂಗೇರಿ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಂಡಿರಲಿಲ್ಲ, ಇದೇ ಮೊದಲ ಪ್ರಕರಣವಾಗಿದ್ದು,
ಚಿಕಿತ್ಸೆ ಫಲಕಾರಿಯಾಗದೆ ಮಂಗನ ಕಾಯಿಲೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಇದುವರೆಗೂ ಮೂರು ಪ್ರಕರಣಗಳು ಕಾಣಿಸಿಕೊಂಡಿದೆ.
ಕೊಪ್ಪ ತಾಲೂಕಿನ ಜೋಗಿಸರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ 35 ವರ್ಷದ ಮಹಿಳೆಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೇ ಕೊಪ್ಪ ತಾಲೂಕಿನ 65 ವರ್ಷದ ವ್ಯಕ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಇವರು ಗುಣಮುಖರಾಗಿದ್ದಾರೆ.