ನವದೆಹಲಿ: 2024ರ ಲೋಕಸಭಾ ಚುನಾವಣೆಯ ಪ್ರಚಾರ ಕಾವು ಅಬ್ಬರದಿಂದ ನಡೆಯುತ್ತಿದೆ. ಮತದಾರರನ್ನು ಓಲೈಸಲು ಪಕ್ಷಗಳು ಪ್ರಣಾಳಿಕೆಯ ಮೂಲಕ ಜನರ ಮುಂದೆ ಭರವಸೆಯನ್ನು ಇಡುತ್ತಿದ್ದು, ಕಳೆದ ವಾರ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ‘ನ್ಯಾಯ ಪತ್ರ’ದ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಬಿಜೆಪಿ ಇಂದು ತನ್ನ ಪ್ರಣಾಳಿಕೆಯನ್ನು (BJP Manifesto) ಸಂಕಲ್ಪ ಪತ್ರದ (Sankalpa Patra) ಹೆಸರಿನಲ್ಲಿ ಬಿಡುಗಡೆ ಮಾಡಿದೆ.
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ಅವರ ಜನ್ಮದಿನದಂದೇ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ದೇಶದ ನಿರ್ಮಾತೃಗಳಲ್ಲಿ ಓರ್ವರಾದ ಸಂವಿಧಾನ ಶಿಲ್ಪಿಯನ್ನು ಬಿಜೆಪಿ ಗೌರವಿಸಿತು. ‘ಸಂಕಲ್ಪ ಪತ್ರ’ದ ಹೆಸರಿನಲ್ಲಿ ಬಿಜೆಪಿ ತನ್ನ ಭರವಸೆಯನ್ನು ಜನರ ಮುಂದಿಟ್ಟಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಯುವಕರು, ರೈತರು, ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಘೋಷಿಸಿದೆ. ಜೊತೆಗೆ ಮೀನುಗಾರರಿಗೆ ವಿಮಾ ಸೌಲಭ್ಯಗಳನ್ನು ಒದಗಿಸುವುದಾಗಿ ಮತ್ತು ಧಾನ್ಯಗಳನ್ನು ಸೂಪರ್‌ಫುಡ್‌ಗಳಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ. ಏಕಲವ್ಯ ಶಾಲೆ ತೆರೆಯುವ ಭರವಸೆಯನ್ನೂ ನೀಡಲಾಗಿದ್ದು, ಅಲ್ಲದೆ, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಕಲ್ಯಾಣಕ್ಕಾಗಿ ಕೆಲಸ ಮಾಡುವ ಭರವಸೆಯನ್ನೂ ಬಿಜೆಪಿ ನೀಡಿದೆ.
ಮೋದಿ ಭರವಸೆಯೇನು?
ನಾವು ಇನ್ನೂ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸುತ್ತೇವೆ.
ಎಲ್ಲಾ ಮನೆಗಳಿಗೆ ಕೈಗೆಟುಕುವ ಪೈಪ್‌ಲೈನ್ ಗ್ಯಾಸ್ ಲಭ್ಯತೆಗೆ ನಾವು ಕೆಲಸ ಮಾಡುತ್ತೇವೆ.
ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ಇಳಿಸಲು ನಾವು ಕೆಲಸ ಮಾಡುತ್ತೇವೆ.
ಪ್ರಧಾನ ಮಂತ್ರಿ ಸೂರ್ಯಘರ್ ಬಿಲ್ಜಿ ಯೋಜನೆ ಪ್ರಾರಂಭಿಸಲಾಗುವುದು.
ಮನೆಯಲ್ಲಿ ಉಚಿತ
ವಿದ್ಯುತ್, ನೀವು ಹೆಚ್ಚುವರಿ ವಿದ್ಯುತ್ ನಿಂದ ಹಣ ಪಡೆಯುತ್ತೀರಿ.
10 ಲಕ್ಷದಿಂದ 20 ಲಕ್ಷಕ್ಕೆ ವಿಕಲಚೇತನರಿಗೆ ಆದ್ಯತೆ ನೀಡಲಾಗುವುದು.
70 ವರ್ಷ ಮೇಲ್ಪಟ್ಟವರನ್ನೂ ಆಯುಷ್ಮಾನ್ ಭಾರತ್ ಯೋಜನೆಗೆ ತರಲಾಗುವುದು.
ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ 5 ವರ್ಷಗಳ ಕಾಲ ಉಚಿತ ಧಾನ್ಯ ಯೋಜನೆ ಮುಂದುವರಿಯಲಿದೆ, ಬಿಜೆಪಿಯ ನಿರ್ಣಯ ಪತ್ರಕ್ಕಾಗಿ ಇಡೀ ದೇಶವು ಕುತೂಹಲದಿಂದ ಕಾಯುತ್ತಿದೆ. ಇದಕ್ಕೆ ದೊಡ್ಡ ಕಾರಣವಿದೆ. 10 ವರ್ಷಗಳಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯ ಪ್ರತಿಯೊಂದು ಅಂಶವನ್ನು ಗ್ಯಾರಂಟಿಯಾಗಿ ಜಾರಿಗೊಳಿಸಿತು. ಈ ವೇಳೆ ದೇಶದ ಹಲವು ರಾಜ್ಯಗಳಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ ಎಂದರು.
ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಣಾಳಿಕ ಸಮಿತಿಯ ಎಲ್ಲಾ 27 ಸದಸ್ಯರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು, ಕೇಂದ್ರ ಸಚಿವರುಗಳು ಉಪಸ್ಥಿತರಿದ್ದರು.