ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಅಪಘಾತ ನಡೆದಿದೆ. ಮಂಗಳೂರು ಮೂಲದ ಅಕೀಲ್, ನಾಸಿರ್, ರಿಝ್ವಾನ್ ಸಾವನ್ನಪ್ಪಿದ ಯುವಕರು. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಕಾರಿನಲ್ಲಿದ್ದ ನಾಲ್ವರು ಕೂಡ SAQCO ಎಂಬ ಕಂಪನಿಯಲ್ಲಿ ನೌಕರರಾಗಿದ್ದರು ಎನ್ನಲಾಗಿದೆ. ಮಂಗಳೂರಿನ ಮೂವರ ಸಹಿತ ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟ ಮಾಹಿತಿ ಲಭ್ಯವಾಗಿದೆ. ಮೃತದೇಹಗಳನ್ನು ಸೌದಿಯ ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಮಂಗಳೂರಿನ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಅಕೀಲ್ ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಎಂದು ತಿಳಿದು ಬಂದಿದೆ.