ತಿರುವನಂತಪುರ: ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ದರ ಇನ್ನಷ್ಟು ದುಬಾರಿಯಾಗಲಿದೆ. ಕೇರಳದ ಎಡಪಂಥೀಯ ಸರಕಾರವು 2023ರ ಬಜೆಟ್ ಮಂಡಿಸಿದ್ದು, ಅದರಲ್ಲಿ ಪೆಟ್ರೋಲ್, ಡೀಸೆಲ್, ಲಿಕ್ಕರ್‌ಗೆ ಸಾಮಾಜಿಕ ಭದ್ರತಾ ಸೆಸ್ ವಿಧಿಸುವ ಪ್ರಸ್ತಾಪ ಮಾಡಿದೆ. ಈ ಮೂಲಕ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವ ಗುರಿಯನ್ನು ಹೊಂದಿದೆ ಆದರೆ ಗ್ರಾಹಕನ ಕೈ ಸುಡಲಿದೆ.
500ರಿಂದ 999 ರೂ.ವರೆಗಿನ ಐಎಂಎಫ್‌ಎಲ್‌ನ ಪ್ರತಿ ಮದ್ಯದ ಬಾಟಲ್‌ಗೆ ತಲಾ 20 ರೂ. ಸೋಷಿಯಲ್ ಸೆಕ್ಯೂರಿಟಿ ಸೆಸ್ ವಿಧಿಸುವ ಉದ್ದೇಶ ಹೊಂದಿರುವುದಾಗಿ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಹೇಳಿದ್ದಾರೆ.
"ಇದರಿಂದ ಸೋಷಿಯಲ್ ಸೆಕ್ಯೂರಿಟಿ ಸೀಡ್ ಫಂಡ್‌ಗೆ ಹೆಚ್ಚುವರಿಯಾಗಿ 750 ಕೋಟಿ ರೂ. ಹೆಚ್ಚುವರಿ ಆದಾಯ ದೊರಕುವ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಭೂಮಿಯ ಮಾರುಕಟ್ಟೆ ಮೌಲ್ಯ ಮತ್ತು ನಿಜವಾದ ಮೌಲ್ಯದ ನಡುವಿನ ಅಂತರ ತಗ್ಗಿಸುವ ಉದ್ದೇಶವನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಭೂಮಿಯ ಫೇರ್‌ವ್ಯಾಲ್ಯೂ (ಇತರೆ ರಾಜ್ಯಗಳಲ್ಲಿ ಸರ್ಕಲ್ ರೇಟ್ ಇತ್ಯಾದಿ ಹೆಸರುಗಳಿಂದ ಕರೆಯುವ ಮೌಲ್ಯ) ವನ್ನು ಶೇಕಡ 20ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಎಲೆಕ್ಟ್ರಿಕ್ ಮೋಟಾರ್ ವಾಹನಗಳು ಮತ್ತು ಎಲೆಕ್ಟ್ರಿಕ್ ಟೂರಿಸ್ಟ್ ಮೋಟಾರ್ ಕ್ಯಾಬ್‌ಗಳ ಖರೀದಿ ಸಮಯದ ಒಂದು ಬಾರಿಯ ತೆರಿಗೆಯನ್ನು ಶೇಕಡ 5ರಷ್ಟು ಇಳಿಸಲು ಉದ್ದೇಶಿಸಲಾಗಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಬಾಲಗೋಪಾಲ್ ಅವರು ಇಂದು ಮಂಡಿಸಿದ ತಮ್ಮ ಬಜೆಟ್‌ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ₹ 100 ಕೋಟಿ ಮೀಸಲಿಟ್ಟಿದ್ದಾರೆ. ಇದೇ ಸಮಯದಲ್ಲಿ ಬೆಲೆ ಏರಿಕೆಯನ್ನು ನಿಭಾಯಿಸಲು 2,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಜೊತೆಗೆ ಮೂಲಸೌಕರ್ಯ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಉಪಕ್ರಮಗಳನ್ನು ಘೋಷಿಸಿದ್ದಾರೆ.
ಕೇಂದ್ರದ ಹಣಕಾಸು ನೀತಿಗಳು ಮತ್ತು ಸಾಲದ ಮಿತಿಯನ್ನು ಕಡಿತಗೊಳಿಸುವ ನಿರ್ಧಾರದಿಂದ ರಾಜ್ಯದ ಆರ್ಥಿಕತೆಯು ಸವಾಲುಗಳನ್ನು ಎದುರಿಸುತ್ತಿದೆಯಾದರೂ, ಕೇರಳ ಸಾಲದ ಬಲೆಯಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ. ಆರ್ಥಿಕ ಅಡಚಣೆಗಳು ಸರ್ಕಾರದ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ ಅವರು, ಬಜೆಟ್‌ನಲ್ಲಿ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹ 100 ಕೋಟಿ ಮೀಸಲಿಡಲಾಗುವುದು ಎಂದು ಹೇಳಿದರು.