ಸಂತೋಷ್ ಕುಲಾಲ್ ನೆತ್ತರಕೆರೆ.

ಪ್ರಸ್ತುತ ಸಮಾಜದಲ್ಲಿ ಬದಲಾದ ಕಾಲ,ಪರಿಸ್ಥಿತಿ, ಸನ್ನಿವೇಶಗಳಲ್ಲಿ, ಎಲ್ಲಿ ಲಾಭವಿದೆಯೋ ಅಲ್ಲಿ ತ್ಯಾಗ, ಎಲ್ಲಿ ಪ್ರಚಾರ ಸಿಗುತ್ತದೆ ಅಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುವವರೇ ಅಧಿಕ. ಸಮಾಜಮುಖೀ ಚಿಂತನೆಗಳಿಂದ ನಿರಂತರವಾಗಿ ಸಮಾಜಕ್ಕಾಗಿ ನಾನು ಏನು ಮಾಡಲು ಸಾಧ್ಯ ಎಂದು ಚಿಂತಿಸುವವರು ಬಹಳ ವಿರಳ. ಆ ನಿಟ್ಟಿನಲ್ಲಿ ನಿಸ್ವಾರ್ಥದಿಂದ ತನ್ನ ಬದುಕನ್ನೇ ಸಮಾಜ ಸೇವೆಗೆ ಮುಡಿಪಾಗಿಟ್ಟ, ರಾಷ್ಟೀಯ ಚಿಂತನೆಯ ಮೂಲಕ ಕೊಡಮಣ್ಣ್ ಎಂಬ ಪುಟ್ಟ ಊರಿನಲ್ಲಿ ಗ್ರಾಮ ವಿಕಾಸದ ಕಲ್ಪನೆಯೊಂದಿಗೆ ಜನ ಸಂಘಟನೆಯನ್ನು ಮಾಡಿ ಇಂದು ಸ್ವಾವಲಂಬಿ ಗ್ರಾಮವನ್ನಾಗಿ ಸಜ್ಜುಗೊಳಿಸಿ,ದೇಶವ್ಯಾಪಿಯಾಗಿ ಕೊಡಮಣ್ಣ್ ಊರಿನ ಹೆಸರನ್ನು ಪ್ರಚಲಿತಗೊಳಿಸಿದ ಸಾಧಕ, ಸದಾ ನಗುಮೊಗದ, ಎಲ್ಲರನ್ನು ಸಮಾನವಾಗಿ ಗೌರವಿಸುವ, ನೇರ ನಡೆ ನುಡಿಯ,ಸೇವಾ ದುರಂಧರ, ಸಂಘ ನಿಷ್ಠೆಯ ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಎಂಬ ಅನರ್ಘ್ಯ ರತ್ನ ಲೌಕಿಕ ಜೇವವನ್ನು ಬಿಟ್ಟು, ಮರೆಯಾಗಿದೆ.

ಸದಾ ಬಿಳಿ ಉಡುಪು ಧರಿಸುವುದರೊಂದಿಗೆ ಮನಸ್ಸನ್ನು ಬಿಳಿಯಾಗಿ, ತಿಳಿಯಾಗಿ ಇಟ್ಟುಕೊಂಡ ಕಾಂತಪ್ಪಣ್ಣ ತನಗಾಗಿ ಬದುಕದೆ "ಸೇವಾ ಹೀ ಪರಮೋಧರ್ಮ "ಎಂಬಂತೆ ಸನ್ಮಾನ, ಬಿರುದುಗಳಿಂದ ದೂರ ಇದ್ದು, ಪ್ರಚಾರ ಬಯಸದೆ ಸಮಾಜಮುಖಿ ಸೇವೆಯಲ್ಲಿ ತನ್ನ ಇಡೀ ಬದುಕನ್ನೇ ಸವೆಸಿ ದಿಟ್ಟ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ.

ಸುಮಾರು 35ವರ್ಷಗಳ ಹಿಂದೆ ಕೊಡಮಣ್ಣ್ ನಲ್ಲಿ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯನ್ನು ಪ್ರಾರಂಭಿಸಿ ಅ ಮೂಲಕ ಶ್ರದ್ದಾ ಭಕ್ತಿಯಿಂದ ಹಾಗೂ ಶಾಸ್ತ್ರೋಕ್ತವಾಗಿ, ವೈದಿಕ, ಧಾರ್ಮಿಕ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದ ಶಾರದಾ ಪೂಜಾ ಮಹೋತ್ಸವವನ್ನು ಆಚರಿಸುವುದರ ಮೂಲಕ ಅ ಭಾಗದ ಯುವಕರನ್ನು ಒಟ್ಟುಗೂಡಿಸಿ, ಸಂಘಟಿಸಿ ಅವರನ್ನು ಸಾಮಾಜಿಕ, ಧಾರ್ಮಿಕ ಸೇವಾ ಚಟುವಟಿಕೆಗಳಿಗೆ ತೊಡಗಿಸುವುದರೊಂದಿಗೆ, ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯಗಳಿಗೆ ಮುನ್ನುಡಿ ಬರೆದವರು ಕೊಡಮಣ್ಣ್ ಕಾಂತಪ್ಪ ಶೆಟ್ಟಿಯವರು.

ಅಬಾಲ ವೃದ್ಧರೊಂದಿಗೆ ಅವರು ಬೆರೆಯುವ ರೀತಿ ಎಲ್ಲರಿಗೂ ಬೆರಗು ಹುಟ್ಟಿಸುವಂತದ್ದು,ಅವರು ಚಿಕ್ಕ ಮಕ್ಕಳ ಕಿವಿಯನ್ನು ಹಿಂಡುವುದರ ಹಿಂದೆ ಮಕ್ಕಳಿಗೆ ನೋವು ಸಂಕಟವನ್ನು ಎದುರಿಸುವ ಆತ್ಮಸ್ಟೈರ್ಯ, ಧೈರ್ಯ ಬಾಲ್ಯದಿಂದಲೇ ಬರಲಿ ಎನ್ನುವ ಉದ್ದೇಶವಿರಬಹುದೇ.? ಯುವಕರ ಹೆಗಲಿಗೆ ಕೈ ಹಾಕುವ ಹವ್ಯಾಸದ ಹಿಂದೆ, ಸಮಾಜದಲ್ಲಿ ಯುವಕರು ಆತ್ಮವಿಶ್ವಾಸದಿಂದ,ಯಾವುದೇ ಕೆಟ್ಟ ವ್ಯಸನಗಳಿಗೆ ಬಲಿಯಾಗದೆ ಎಲ್ಲರೊಂದಿಗೂ ಪ್ರೀತಿ, ಸ್ನೇಹದಿಂದ ಸಮಾಜಕ್ಕೆ ಮಾದರಿಯಾಗಿ ಬಾಳಿ ಬದುಕಲಿ ಎನ್ನುವ ತಾತ್ಪರ್ಯವಿರಬಹುದೇ.?.ಹಿರಿಯರಿಗೆ ವಿಧೇಯರಾಗಿ ಗೌರವದಿಂದ ನಡೆದುಕೊಳ್ಳುವ ಇವರ ಉದ್ದೇಶದ ಹಿಂದೆ ಸಂಸ್ಕಾರಯುತ ಜೀವನವೇ ಭಾರತದ ಸಂಸ್ಕೃತಿಯ ಜೀವಾಳ ಎನ್ನುವ ಆಶಯವಿರಬಹುದೇ..? ಹೀಗೆ ಸರ್ವರಿಗೂ ಆದರ್ಶವಾಗಿದ್ದ ಇವರ ಬದುಕು ಎಲ್ಲರಿಗೂ ಜೀವನ ಪಾಠದಂತಿದೆ.

ಎಲ್ಲರೂ ಪ್ರೀತಿಯಿಂದ ಕರೆಯುವ ಮೀಸೆ ಕಾಂತಪ್ಪಣ್ಣ ಎಂಬ ಅ ಹುರಿ ಮೀಸೆಯ ಹಿಂದಿನ ದೇಶಭಕ್ತಿಯ ಹೋರಾಟದ ಕಿಚ್ಚು, ಅವರನ್ನು ಶ್ರೀ ರಾಮನ ನೆಲೆವೀಡು ಪುಣ್ಯಭೂಮಿ ಅಯೋಧ್ಯೆ ತನಕ ಕೊಂಡು ಹೋಗಿದೆ ಎನ್ನುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗೆ ಹಲವಾರು ಅವರ ಸದ್ಗುಣಗಳು ಅವರನ್ನು ಸಮಾಜದಲ್ಲಿ ಪರಿಪಕ್ವ ವ್ಯಕ್ತಿಯಾಗಿ ರೂಪುಗೊಳಿಸಿದೆ.

ಇಂದು ಅವರ ದೇಹ ಅಳಿದಿದೆ. ಆದರೆ ಆತ್ಮಕ್ಕೆ ಸಾವಿಲ್ಲ, ವ್ಯಕ್ತಿ ಅಳಿದರೂ ವ್ಯಕ್ತಿತ್ವ ಶಾಶ್ವತ ಎಂಬ ನುಡಿಯಂತೆ, ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಅವರು ಉತ್ತಮ ನಡವಳಿಕೆಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಾಜಕೀಯ,ಸಹಕಾರಿ,ಕಲಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧಿಸಿದ ಸಾಧನೆಯ ಹಿಂದೆ ಅದೆಷ್ಟೋ ನಿದ್ದೆ ಗೆಟ್ಟ ದಿನಗಳ ಶ್ರಮವಿದೆ. ತ್ಯಾಗವಿದೆ, ಅರ್ಪಣಾ ಮನೋಭಾವದ ಸೇವೆ ಇದೆ,

 ರಾಷ್ಟ್ರೀಯ ಚಿಂತನೆಯ ಮೂಲಕ ಗ್ರಾಮವಿಕಾಸದೊಂದಿಗೆ ತಾನು ಹುಟ್ಟಿದ ಪುಣ್ಯಭೂಮಿಯ ಋಣವನ್ನು, ತೀರಿಸಲು,ಸಾಮಾಜಿಕವಾಗಿ,ವ್ಯಯಕ್ತಿಕಯಾಗಿ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ಅರೋಗ್ಯವನ್ನು ಕೂಡ ಲೆಕ್ಕಿಸದೆ,ಎದೆಗುಂದದೆ ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ,ಇಂದು ಸಾರ್ಥಕ್ಯಭಾವದಿಂದ ತನ್ನ ಉತ್ತಮ ಕೆಲಸಗಳಿಂದಲೇ ಸಮಾಜ ಗುರುತಿಸುವ ಮೂಲಕ ಇತರರಿಗೆ ಆದರ್ಶ ವ್ಯಕ್ತಿಯಾಗಿ ಸ್ವರ್ಗಸ್ಥರಾಗಿದ್ದಾರೆ.

ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಎಂಬ ಒಬ್ಬ ಸಾಮಾನ್ಯ ಕಾರ್ಯಕರ್ತರೊಬ್ಬರು,ತನ್ನ ವ್ಯಕ್ತಿತ್ವ ಹಾಗೂ ಸಂಘಟನಾ ಶಕ್ತಿಯಿಂದ ಅಸಮಾನ್ಯವಾಗಿ ಬೆಳೆದು ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ, ಮಾದರಿ ವ್ಯಕ್ತಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.ಇಂದು ಧೈಹಿಕವಾಗಿ ನಮ್ಮನ್ನು ಅಗಲಿದ್ದಾರೆ,ಸಾರ್ವಜನಿಕ ಬದುಕಿನಲ್ಲಿ ಯಾರೂ ತುಂಬಲಾರದ ನಿರ್ವಾತವೊಂದು ನಿಸ್ಸಂಶಯವಾಗಿ ಸೃಷ್ಟಿಯಾಗಿದೆ.ಆದರೆ ಅವರ ವ್ಯಕ್ತಿತ್ವ,ನಡೆ ನುಡಿ ಸಮಾಜ ಸೇವೆಯ ತುಡಿತ,ಅರ್ಪಣಾ ಮನೋಭಾವದ ಜೀವನ, ಇವೆಲ್ಲ ಮುಂದಿನ ತಲೆಮಾರಿಗೆ ದಾರಿದೀಪ. ಈ ಬೆಳಕನ್ನು ಜತನದಿಂದ ಕಾಯ್ದು, ನಮ್ಮ ಜೀವನದಲ್ಲಿ ಅಳವಡಿಸಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಮುಂದುವರಿಸಿಕೊಂಡು ಹೋದರೆ ಅದೇ ಅ ಮಹಾನ್ ಚೇತನಕ್ಕೆ ಸಲ್ಲಿಸುವ ನಿಜವಾದ ಗೌರವ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ

Leave a Comment