ಬೆಳ್ತಂಗಡಿ: ತಾಲೂಕಿನ ಪ್ರತಿಭೆ ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿ ಸಾಲಿಯತ್ (24) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ
ಪಡಂಗಡಿ ಪೊಯ್ಯೇಗುಡ್ಡೆ ನಿವಾಸಿ ಪ್ರಸ್ತುತ ವಿವಾಹವಾಗಿ ಒಂದು ವರ್ಷವಾಗಿ ಚಿಕ್ಕಮಗಳೂರು ಪತಿ ಮನೆಯಲ್ಲಿದ್ದವರು. ಎದೆನೋವಿನಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಬುಧವಾರ ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ.
ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ 9 ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆ ತೋರಿದ್ದರು.
ರಾಷ್ಟ್ರದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿರುವುದು ಇವರ ಸಾಧನೆಯ ಹಾದಿಯಾಗಿದೆ. ಅವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಂಸಿ ಗೌರವಿಸಿದ್ದರು.
ಮೃತರು ತಂದೆ, ತಾಯಿ, ಪತಿಯನ್ನು ಅಗಲಿದ್ದಾರೆ.