ಮುಂಬೈ: ಜನಪ್ರಿಯ ನ್ಯಾಚುರಲ್ಸ್ ಐಸ್‌ಕ್ರೀಂ ಸಂಸ್ಥೆಯ 'ಐಸ್‌ಕ್ರೀಂ ಮ್ಯಾನ್ ' ಎಂದು ಖ್ಯಾತಿ ಗಳಿಸಿರುವ ಮಂಗಳೂರು ಮೂಲದ ರಘುನಂದನ್ ಶ್ರೀನಿವಾಸ ಕಾಮತ್ (75ವ) ಕಳೆದ ತಡರಾತ್ರಿ ನಿಧನ ಹೊಂದಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ಹಣ್ಣಿನ ವೈಶಿಷ್ಟ್ಯತೆಗಳನ್ನು ಎಳವೆ ವಯಸ್ಸಿನಲ್ಲಿಯೇ ಕಲಿತುಕೊಂಡು ತಮ್ಮ 14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ಅಲ್ಲಿ
ಸೋದರರ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ 1984ರಲ್ಲಿ ನ್ಯಾಚುರಲ್ ಐಸ್‌ಕ್ರೀಂ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು.
ರಘುನಂದನ್ ಅವರ ನ್ಯಾಚುರಲ್ ಐಸ್‌ಕ್ರೀಂ ಪ್ರಸ್ತುತ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ 400 ಕೋಟಿ ರುಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ.