ಬಂಟ್ವಾಳ :ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದ ಕ ಜಿಲ್ಲಾ ಘಟಕ ಬಂಟ್ವಾಳ ಇದರ ಅಶ್ರಯದಲ್ಲಿ ನಡೆಯುವ :"ಪತ್ತಾಣಾಜೆ "ಜಾನಪದ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಜಾನಪದ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ಪಡೆದ ಮಂಜಮ್ಮ ಜೋಗತಿ ಅವರು ಬಿ ಸಿ ರೋಡಿನ ಲಯನ್ಸ್ ಕ್ಲಬ್ ಗೆ ಮೇ 19ರಂದು ಬೆಳಿಗ್ಗೆ ಆಗಮಿಸಲಿದ್ದಾರೆ.
ಸಮಾಜಕ್ಕೆ ಸ್ಫೂರ್ತಿಯ ಚೇತನ: ಮಂಜಮ್ಮ ಜೋಗತಿ.
ಸತತ ನಾಲ್ಕು ದಶಕಗಳಿಂದಲೂ ನಿರಂತರ ಕಲಾಸೇವೆಗೈದಿರುವ ಮಂಜಮ್ಮ ಜೋಗತಿ ಅಶಕ್ತ ಹೆಣ್ಣುಮಕ್ಕಳು-ದಿಕ್ಕೇ ಕಾಣದ ತೃತೀಯಲಿಂಗಿಗಳ ಪಾಲಿಗೆ ಸ್ಫೂರ್ತಿಯ ಚೇತನವಾಗಿದ್ದು ವಿಶೇಷ. ನಿತ್ಯ ಬದುಕಿನ ಹೋರಾಟ, ಸಮಾಜದ ಕುಹುಕ ಮಾತುಗಳ ಮಧ್ಯೆ ತಮ್ಮದೇ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆ ಕಂಡುಕೊಂಡು ಮಂಜಮ್ಮ ಅರಳಿನಿಂತ ಬಗೆಯೇ ಬೆರಗಿನ ಕಥನ.
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದಲೋಕ ಪ್ರಶಸ್ತಿ,
ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತಿತರ ಗೌರವಗಳೆಲ್ಲವೂ ಕಲೆಯ ಕೈಹಿಡಿದು ಗೆದ್ದ ಮಂಜಮ್ಮ ಅವರ ಸೇವೆಗೆ ಸಂದ ಸತ್ಫಲಗಳು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾಸಂಘಟನೆಗೆ ಸ್ಫೂರ್ತಿ ನೀಡಿದ ಮಂಜಮ್ಮ ಜೋಗತಿ ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯದಲ್ಲಿ ತಲ್ಲೀನರು. ಛಲ, ಪರಿಶ್ರಮ, ಬದ್ಧತೆಗಳು ಬದುಕನ್ನು ನಳನಳಿಸಿ, ಗೆಲ್ಲಿಸಿ, ಗೌರವಿಸಬಲ್ಲದೆಂಬ ಲೋಕನುಡಿಗೆ ಮಂಜುಮ್ಮ ಜೋಗತಿಯವರ ಈ ಕಲಾಪೂರ್ಣ ಬದುಕು ಸಮಾಜಕ್ಕೆ ಮಾದರಿ, ಪ್ರೇರಣೆ.