ಸ್ವಾತಂತ್ರ್ಯ ಅಮೃತದ ಸವಿನೆನಪಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನ.

ಗಣೇಶ್ ಕಾಮತ್ ಮೂಡಬಿದಿರೆ
ಸ್ವಾತಂತ್ರ್ಯ ಅಮೃತದ ಸವಿನೆನಪಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನ.

ನಮ್ಮ ನೆಲದಲ್ಲಿ ಪರಕೀಯರ ದಬ್ಬಾಳಿಕೆ, ಅದರಲ್ಲೂ ವಿಶೇಷವಾಗಿ ಬ್ರಿಟೀಷರ ದಾಸ್ಯದಿಂದ ಸ್ವತಂತ್ರರಾಗಲು ನಾಡಿನ ಉದ್ದಗಲ ನಡೆದ ಸ್ವಾಬಿಮಾನದ ಹೋರಾಟದಲ್ಲಿ ಕರಾವಳಿಯ ದ.ಕ ಜಿಲ್ಲೆಯ ಜೈನಕಾಶಿ, ಇಂದಿನ ಜ್ಞಾನಕಾಶಿ ಮೂಡುಬಿದಿರೆಯ ಕೊಡುಗೆಯೂ ಗಮನಾರ್ಹವಾದದ್ದು. ಹದಿನಾರನೇ ಶತಮಾನದ ಉತ್ತರಾರ್ಧದಲ್ಲೇ ಪೋರ್ಚಿಗೀಸರ ಅತಿಕ್ರಮಣ ನೀತಿಗೆ ಸಡ್ಡು ಹೊಡೆದ ಉಳ್ಳಾಲದ ರಾಣಿ ಅಬ್ಬಕ್ಕನ ತವರು ನೆಲವಾದ ಮೂಡುಬಿದಿರೆಯಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳಿಗೆ ಸಾಕ್ಷಿಯಾಗಿ ಚೌಟರ ಅರಮನೆ, ಸ್ವರಾಜ್ಯ ಮೈದಾನ, ಸಮಾಜ ಮಂದಿರದ ಧ್ವಜಸ್ಥಂಭ, ಗಾಂಧೀ ಪಾರ್ಕ್ ಹೀಗೆ ಹಲವು ಸ್ಮಾರಕಗಳು ಇಂದಿಗೂ ನಮ್ಮ ಹಿರಿಯರ ರಾಷ್ಟ್ರಾಭಿಮಾನ, ತ್ಯಾಗ, ಸ್ಫೂರ್ತಿಯ ಸಂಕೇತಗಳಂತಿವೆ.

ಈಗ ತಾಲೂಕಾಗಿರುವ ಮೂಡುಬಿದಿರೆಯ ಹೃದಯ ಭಾಗದಲ್ಲಿ ನಾಡಿನ ಸುವ್ಯವಸ್ಥಿತ ಸಿಂಥೆಟಿಕ್ ಟ್ರ್ಯಾಕ್ನ ತಾಣವೆನಿಸಿರುವ ಸ್ವರಾಜ್ಯ ಮೈದಾನ ಸ್ವಾತಂತ್ರ್ಯ ಅಮೃತದ ಸವಿನೆನಪುಗಳ ಸಂಗಮ ಸ್ಥಾನವೂ ಹೌದು. ಹಲವು ದಶಕಗಳ ಹಿಂದೆ ಹತ್ತಿರದಲ್ಲೇ ಇರುವ ಬ್ರಿಟಿಷ್ ಅಧಿಕಾರಿಗಳ ವಾಸ್ತವ್ಯಕ್ಕಿದ್ದ ಸರ್ ಆರ್ಥರ್ ಲವ್ಮೀ ಬಂಗ್ಲೋ (1907) ಕಾರಣ ಬಂಗ್ಲೆ ಗುಡ್ಡೆಯೆನಿಸಿದ್ದ ಈ ಮೈದಾನದ ಸುಮಾರು 29 ಎಕ್ರೆ ಸ್ಥಳದ ಒಂದು ಮೂಲೆಗೆ ಪುರಾತನ ಮಾರಿಗುಡಿಗಳು, ಮತ್ತೊಂದು ಅಂಚಿನಲ್ಲಿ ಬೋವಿಕೇರಿ ಹೀಗೆ ರಾಜಾಡಳಿತ ಕಾಲಕ್ಕೆ ಮೈದಾನ ಅದೇನಾಗಿತ್ತು ಎನ್ನುವುದಿನ್ನೂ ಅಸ್ಪಷ್ಟ. ನಂತರ ರಕ್ಷಣಾ ಇಲಾಖೆಯದ್ದು ಎಂದು ಗುರುತಿಸಿಕೊಂಡು ಮಿಲಿಟರಿ ತಂಗುವ ಸ್ಥಳವಾಗಿ 1962ರಲ್ಲಿ ಇಲ್ಲಿ ಮಿಲಿಟರಿ ತಾತ್ಕಾಲಿಕ ಕ್ಯಾಂಪ್ ನಡೆದಿತ್ತು ಎನ್ನಲಾಗುತ್ತಿದೆ.

ಸಭಾಂಗಣಗಳೇ ಇಲ್ಲದ ಅಂದಿನ ಕಾಲಕ್ಕೆ ಸಭೆ ಸೇರಲು ಬಳಕೆಯಾಗುತ್ತಿದ್ದ ಬಂಗ್ಲೆ ಗುಡ್ಡೆ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಗೂ ಸಂಗಮ ತಾಣವಾಗಿತ್ತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಊರಿಗೆ ಊರೇ ಸಂಭ್ರಮಪಟ್ಟಿತ್ತು. ಆಲಂಗಾರಿನಿಂದ ಮೂಡುಬಿದಿರೆ ಪೇಟೆ ಮೂಲಕ ಇದೇ ಬಂಗ್ಲೆ ಗುಡ್ಡೆವರೆಗೆ ನಡೆದ ಐತಿಹಾಸಿಕ ವಿಜಯೋತ್ಸವದಲ್ಲಿ ಹಿರಿಯ ಕಿರಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಮೈದಾನಕ್ಕೆ ಸ್ವಾತಂತ್ರ್ಯದ ಸವಿನೆನಪಿಗಾಗಿ ಸ್ವರಾಜ್ಯ ಮೈದಾನ ಎಂದು ನಾಮಕರಣ ಮಾಡಿದ್ದರು ಎಂದು ತಿಳಿದು ಬರುತ್ತದೆ.

ಉಳ್ಳಾಲದ ತುಳುವರ ವೀರರಾಣಿ ಅಬ್ಬಕ್ಕ( 1525-70)ನ ಮೂಲವೂ ಮೂಡುಬಿದಿರೆಯ ಚೌಟರ ಅರಮನೆಯದ್ದು. ಸ್ವಾತಂತ್ರ್ಯ ಹೋರಾಟದ ಮೊದಲ ಮಹಿಳೆಯಾಗಿಯೂ ಆಕೆಯದ್ದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಸಾಧನೆ. ಕಾಷ್ಠ ಶಿಲ್ಪದ ಮೇರು ಕೃತಿಯಾಗಿ ಇಂದಿಗೂ ಉಳಿದುಕೊಂಡಿರುವ ಚೌಟರ ಅರಮನೆಯ ಭಾಗಗಳು, 2019ರ ಡಿ25 ಕಂಬಳ ಕರೆಯ ಬಳಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದ್ದ ತುಳುನಾಡಿನ ತೂಟೆ (ದೀವಟಿಗೆ) ಹಿಡಿದ 18 ಅಡಿ ಎತ್ತರದ ಅಬ್ಬಕ್ಕನ ಪ್ರತಿಮೆ ರಾಜಾಂಗಣದ ಹೊರಗಿರುವ ಅಬ್ಬಕ್ಕ ಸ್ಮಾರಕ ಆಕೆಯ ನೆನಪನ್ನು ಜೀವಂತವಾಗಿರಿಸಿವೆ.

ಕ್ವಿಟ್ ಇಂಡಿಯಾ ಚಳುವಳಿ ವೇಳೆಗೆ ಬ್ರಿಟೀಷರ ವಿರುದ್ಧ ಅಸಹಕಾರ, ಬಂಡಾಯವನ್ನು ಪ್ರೇರೇಪಿಸುವ ಅನಾಮಧೇಯ ಕರಪತ್ರಗಳು ಅರಮನೆಯ ರಾಜಾಂಗಣದ ಮೈದಾನದಲ್ಲಿ ಆವೇಶದ ಭಾಷಣದಿಂದಾಗಿ ಸೆರೆಯಾದ ಜಿ.ಗೋಪಾಲ ಪೈ ಮಾತ್ರವಲ್ಲ ಅಂದಿನ ಹೊರಾಟಗಾರರಾದ ಕರಿಂಜೆ ಶಶಿಧರ ರಾವ್, ದೇವದಾಸ ಪ್ರಭು, ವಾಸುದೇವ ಕಾಮತ್, ಜನಾರ್ಧನ ಪ್ರಭು, ಶೀನ ಕೊಟ್ಟಾರಿ, ಅಮ್ಮಣ್ಣ ಮೊಲಿ, ಜಿ. ಅಚ್ಚುತ ಶೆಣೈ, ಲಾರೆನ್ಸ್, ಕಡಂದಲೆ ರಾಮಚಂದ್ರ ರಾವ್, ವೆಂಕಟೇಶ ಅನಂತ ಹೀಗೆ ಹಲವು ಹೆಸರುಗಳನ್ನು ವಯೋವೃದ್ಧರಾದ ದಿ. ಗೋವರ್ಧನ ಹೊಸಮನಿ, ದೊಡ್ಮನೆಯ ಮಹಾಬಲ ಶೆಟ್ಟಿ ನೆನಪಿಸಿಕೊಂಡಿದ್ದರು.  

ದೇಶಾಭಿಮಾನ, ಖಾದಿ ಪ್ರೇಮ, ಗಾಂಧೀ ವಿಚಾರ ಧಾರೆಗಳಿಗೆ ಮನಸೋತಿದ್ದ ಅಂದಿನ ಜನತೆಯ ಸ್ವಾಭಿಮಾನದ ಹೋರಾಟ, ಮೊದಲ ಸ್ವಾತಂತ್ರ್ಯ ಸಮರದ ಸವಿನೆಪಿಗಾಗಿ ಸಮಾಜ ಮಂದಿರದಲ್ಲಿ ಕಟ್ಟಿಸಿದ್ದ ಧ್ವಜಕಟ್ಟೆ (1957) ಗಾಂಧೀ ಶತಮಾನೋತ್ಸವ ಸ್ಮಾರಕವಾದ ಗಾಂಧೀಪಾಕರ್್ (1969) ಪೇಟೆಯ ನಡುವಿನ ಗಾಂಧೀನಗರ, ಎಲ್ಲವೂ ಸ್ವಾತಂತ್ರ್ಯದ ಸನಿನೆನಪಿನ ಸ್ಮರಣಿಕೆಗಳೇ.

ಸವಿನೆನಪಿನ ಸ್ಮರಣಿಕೆಯಾಗಿ ಸ್ವರಾಜ್ಯ ಮೈದಾನ

18 ಬಸದಿಗಳು, ದೇವಸ್ಥಾನಗಳು, ಕೆರೆಗಳು ಹೀಗಿರುವ ಮೂಡುಬಿದಿರೆಯಲ್ಲಿ 2003ರಲ್ಲಿ ಡಿ. 18ರಿಂದಲೇ ನಾಲ್ಕು ದಿನಗಳ ಕಾಲ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಸಮಯ ಪ್ರಜ್ಞೆ ಸಹಿತ ನಾಡಿಗೆ ನೂರಾರು ಸಂದೇಶ ನೀಡಿದವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ. ಮೂರು ಹಂತಗಳಲ್ಲಿ ಈ ಮೈದಾನವನ್ನು ಸಮತಟ್ಟಾಗಿಸಿ ಅಭಿವೃದ್ಧಿಯ ಹೊಸ ಭಾಷ್ಯ ಬರೆದವರೂ ಅವರೇ. ವಿಶೇಷ ಎಂದರೆ ಆಗ ಅಲ್ಪಾವಧಿಯಲ್ಲೇ ಮೈದಾನ ಸಮತಟ್ಟಾಗಿಸುವ ಕಾರ್ಯಕ್ಕೆ ಅಹರ್ನಿಶಿ ದುಡಿದವರ ಪೈಕಿ ಗಮನಾರ್ಹರೆಂದರೆ ದಿ. ಮೋಹನ ದಾಸ ಶೆಟ್ಟಿ. ಗಾಂಧೀಜಿ ಹುತಾತ್ಮರಾದ ದಿನವೇ ಹುಟ್ಟಿದ ಕಾರಣ ಮೋಹನದಾಸ ಎಂದು ಹೆಸರು ಪಡೆದಿದ್ದರಂತೆ!

ಮೂಡುಬಿದಿರೆ ಮೂಲದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 60ರ ಸಂಭ್ರಮ, ಸಿಂಥೆಟಿಕ್ ಟ್ರ್ಯಾಕ್, ಅಲ್ಲಿ ವಿವಿ, ಅಂತರ್ ವಿವಿ, ರಾಜ್ಯ, ಅಖಿಲ ಭಾರತ ಮಟ್ಟದ ಹತ್ತಾರು ಕ್ರೀಡಾ ಕೂಟಗಳ ಯಶಸ್ಸು, ಸಾಹಿತ್ಯ ಸಮ್ಮೇಳನ ನಡೆಸಿ 18 ವರ್ಷಗಳ ಬಳಿಕ ಅಲ್ಲೊಂದು ಮಾದರಿ ಕನ್ನಡ ಭವನವೂ ಈಗ ಎದೆಯುಬ್ಬಿಸಿ ನಿಂತಿದೆ. ಹಿರಿಯರ ಈ ಕೊಡುಗೆಯನ್ನು ಸಮಾಜದ ಸಾಂಸ್ಕೃತಿಕ, ಸ್ವಾಸ್ಥ್ಯ ಕಾಯ್ದುಕೊಳ್ಳಲು, ಕ್ರೀಡಾ ಚಟುವಟಿಕೆಯ ಮೂಲಕ ಉಳಿಸಿ ಬೆಳೆಸಿಕೊಳ್ಳಬೇಕು ಎನ್ನುವುದು ಡಾ. ಎಂ. ಮೋಹನ ಆಳ್ವರ ಆಶಯವೂ ಹೌದು.  

ತಲುಪುವುದು ಹೇಗೆ?

ದ.ಕ ಜಿಲ್ಲಾ ಕೇಂದ್ರ ಮಂಗಳೂರಿನಿಂದ 36 ಕಿ.ಮೀ. ಖಾಸಗಿ ಬಸ್ಸುಗಳು ಬಹಳಷ್ಟಿವೆ. ಮೂಡುಬಿದಿರೆ ಪೇಟೆಗೆ ಪ್ರವೇಶಿಸುವ ರಾ.ಹೆ.169 ಪಕ್ಕದಲ್ಲೇ ಸ್ವರಾಜ್ಯ ಮೈದಾನ ಕಾಣಸಿಗುತ್ತದೆ. ಪೇಟೆಯಿಂದ ನೇರವಾಗಿ ಆಳ್ವಾಸ್ ಆಸ್ಪತ್ರೆಗಿರುವ ಒಳ ರಸ್ತೆಯಾಗಿಯೂ ಒಂದಿಷ್ಟು ಹೆಜ್ಜೆ ಹಾಕುವಷ್ಟರಲ್ಲೇ ಸ್ವರಾಜ್ಯ ಮೈದಾನ ಗೋಚರಿಸುತ್ತದೆ

Leave a Comment