ಬಂಟ್ವಾಳ: ಬಂಟ್ವಾಳ ಬೈಪಾಸ್ ಜಂಕ್ಷನಿನಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ 16 ನೇ ಶಾಖೆಯು ಉಳ್ಳಾಲ ತಾಲೂಕಿನ ಬೆಳ್ಳ ಗ್ರಾಮದ ದೇರಳಕಟ್ಟೆ ನಿತ್ಯಾನಂದ ಕಾಂಪ್ಲೆಕ್ಸ್ ನಲ್ಲಿ ಜನವರಿ 14 ರಂದು ಭಾನುವಾರ ಶುಭಾರಂಭಗೊಳ್ಳಲಿದೆ.
ಬುಧವಾರ ಸಂಘದ ಕೇಂದ್ರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸುರೇಶ್ ಕುಲಾಲ್ 1981 ರ ಮೇ 24 ರಂದು ಸ್ವಾತಂತ್ರ್ಯಯೋಧರಾದ ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವ ಹಾಗೂ ಸಹಕಾರಿ ಧುರೀಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ 131 ಸದಸ್ಯರು 22.620 ಸಾ.ರೂ. ಪಾಲು ಬಂಡವಾಳದೊಂದಿಗೆ ಕಾರ್ಯಾರಂಭವಾದ ಬ್ಯಾಂಕ್ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತಾ ಇದೀಗ ದೇರಳಕಟ್ಟೆಯಲ್ಲಿ16 ನೇ ಶಾಖೆಯನ್ನು ಆರಂಭಿಸಲು ಸಜ್ಜಾಗಿದೆ ಎಂದರು.
ಬಂಟ್ವಾಳ ಪೇಟೆ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬೈಪಾಸ್, ಮಂಗಳೂರಿನ ಪಡೀಲ್, ಕಲ್ಲಡ್ಕ, ಬಜಪೆ, ಬಿ. ಸಿ. ರೋಡ್, ಪುಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ಧಕಟ್ಟೆ ಮತ್ತು ಉಪ್ಪಿನಂಗಡಿ ಸೇರಿ 15 ಶಾಖೆಗಳು ಸದಸ್ಯರ ಮತ್ತು ಗ್ರಾಹಕರ ಸಹಕಾರದಲ್ಲಿ ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂದರು.
ದೇರಳಕಟ್ಟೆಯಲ್ಲಿ ಆರಂಭವಾಗುವ 16 ನೇ ಶಾಖೆಯನ್ನು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸಭಾಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಸಭಾಧ್ಯಕ್ಷತೆ ವಹಿಸಲಿದ್ದು, ಭದ್ರತಾ ಕೊಠಡಿಯನ್ನು ಬಿಜೆಪಿ ಮುಖಂಡ ಸಂತೋಷ ಕುಮಾರ್ ರೈ ಬೋಳಿಯಾರ್, ಕಂಪ್ಯೂಟರನ್ನು ಬೆಳ್ಮಾ ಗ್ರಾ.ಪಂ.ಅಧ್ಯಕ್ಷೆ ರಜೀಯಾ, ಕಂಪ ದೈವದ ಮೂಲ್ಯಣ್ಣ ಕೆ. ಬಾಲಕೃಷ್ಣ ಸಾಲಿಯಾನ್ ಸೇಫ್ ಲಾಕರನ್ನು ಉದ್ಘಾಟಿಸಲಿದ್ದು, ಮೊದಲ ಠೇವಣಿ ಪತ್ರವನ್ನು ಕೊಲ್ಯ ಕುಂಭೇಶ್ವರ ವಿ.ಸ.ಸಂಘದ ಅಧ್ಯಕ್ಷ ಗೋಪಾಲ ಕಣ್ವತೀರ್ಥ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದ ಅವರು
ಮಂಗಳೂರು ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್. ರಮೇಶ್, ಕೊಂಡಾಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ದೇರಳಕಟ್ಟೆ ಪಾನೀರು ಚಚ್೯ ನ ಧರ್ಮಗುರು ವಿಕ್ಟರ್ ಡಿಮೆಲ್ಲೊ, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ
ಚಂದ್ರಹಾಸ ಅಡ್ಯಂತಾಯ, ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ, ಉದ್ಯಮಿ ಗೋಪಾಲ, ಕುತ್ತಾರು, ಕಟ್ಟಡದ ಮಾಲಕಿ ಶ್ರೀಮತಿ ವೀಣಾ, ದೇರಳಕಟ್ಟೆ ರತ್ನ ಎಜುಕೇಷನ್ ಟ್ರಸ್ಟ್ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉದ್ಯಮಿ ಶರತ್ ಶೆಟ್ಟಿ ದೇರಳಕಟ್ಟೆ, ಬೆಳ್ಮಾ ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಎಚ್ ಆರ್. ಶ್ರೀಮತಿ ರಮ್ಲತ್ ರವರು ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನು ನಾಲ್ಕು ಶಾಖೆಗಳನ್ನು ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಸೇವೆಯನ್ನು ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಉನ್ನತ ವ್ಯಾಸಂಗಕ್ಕಾಗಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ವಿದ್ಯಾ ಸಾಲ ಸೌಲಭ್ಯ, ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಕೇಂದ್ರ ಕಚೇರಿಯಲ್ಲಿ ಆಳವಡಿಸಲಾಗಿದೆ ಎಂದು ಸುರೇಶ್ ಕುಲಾಲ್ ವಿವರಿಸಿದರು.
4 ಕೋ.ರೂ.ಲಾಭ:
ಆರ್ಥಿಕ ವರ್ಷ 2023 ರ ಮಾ.31ರ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 7769 ಸದಸ್ಯರಿದ್ದು, 7.64 ಕೋ.ರೂ. ಪಾಲು ಬಂಡವಾಳ, 197.69 ಕೋ.ರೂ. ಠೇವಣಾತಿ, ರೂ. 197.69 ಕೋಟಿ, 13.14 ಕೋ.ರೂ. ನಿಧಿಗಳು, 66.79 ಕೋ.ರೂ.ವಿನಿಯೋಗಗಳು, 162.01 ಕೋ.ರೂ.ಸಾಲಗಳಿದ್ದು ಶೇ. 95.06 ಸಾಲ ವಸೂಲಾತಿಯಾಗಿರುತ್ತದೆ.
2022-23ನೇ ಸಾಲಿನಲ್ಲಿ 808.14 ಕೋ.ರೂ.ವ್ಯವಹಾರ ನಡೆಸಿ, 4.00 ಕೋ.ರೂ. ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ 220.34 ಕೋ.ರೂ. ಮೀರಿದ್ದು, ಆಡಿಟ್ ವರ್ಗಿಕರಣದಲ್ಲಿಯು ‘ಎ’ ತರಗತಿ ಪಡೆದಿದೆ ಎಂದು ಈ ಸಂದರ್ಭ ಹಾಜರಿದ್ದ ಸಂಘದ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ವಿವರಿಸಿದರು.
ಸಂಘದಲ್ಲಿ 209 “ಅಮೂಲ್ಯ” ಸ್ವಸಹಾಯ ಗುಂಪುಗಳಿದ್ದು 1863 ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದಾರೆ. ಒಟ್ಟು 61,00,785.84 ಉಳಿತಾಯವನ್ನು ಮಾಡಿರುತ್ತಾರೆ. ಸಂಘದ ಸಾಮಾನ್ಯ ಕ್ಷೇಮ ನಿಧಿಯಿಂದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ 3.00.500.00 ನ್ನು ನೀಡಲಾಗಿದೆ.
ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರಕ್ಕೆ 3.95.150.00, ಸಂಘ ಸಂಸ್ಥೆಗಳಿಗೆ ರೂ. 7,25,000.00 ಸಹಾಯಧನವನ್ನು ನೀಡಲಾಗಿದೆ ಎಂದರು.
ಗ್ರಾಹಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಸೌಲಭ್ಯ, ಸಿಬ್ಬಂದಿಗಳಿಗೆ ಆರೋಗ್ಯ ವಿಮಾ ಸೌಲಭ್ಯ, 10 ಸಾ.ರೂ.ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ಒಂದು ಲಕ್ಷ ಮೊತ್ತದ ಅಪಘಾತ ವಿಮಾ ಸೌಲಭ್ಯ ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪದ್ಮನಾಭ ವಿ.ನಿರ್ದೇಶಕ ರಮೇಶ್ ಸಾಲಿಯಾನ್, ಎಂ. ವಾಮನ ಟೈಲರ್, ಸುರೇಶ್ ಎನ್., ಜನಾರ್ಧನ ಬೊಂಡಾಲ, ಬಿ.ರಮೇಶ್ ಸಾಲಿಯಾನ್, ಜಗನ್ನಿವಾಸ ಗೌಡ, ಗಣೇಶ್ ಸಮಗಾರ, ವಿ.ವಿಜಯ ಕುಮಾರ್ ಮೊದಲಾದವರಿದ್ದರು.